ಭಟ್ಕಳ: ಅಕ್ರಮವಾಗಿ ಚಿನ್ನ ಸಾಗಾಟ ಆರೋಪದ ಮೇರೆಗೆ ಭಟ್ಕಳದ ವ್ಯಕ್ತಿಯೊರ್ವನ ಮನೆ ಹಾಗೂ ಕಚೇರಿಯ ಮೇಲೆ ದಾಳಿ ನಡೆಸಿದ ಪುಣೆಯ ಕಸ್ಟಮ್ಸ್ ಅಧಿಕಾರಿಗಳು, ಹೆಚ್ಚಿನ ವಿಚಾರಣೆಗಾಗಿ ಆತನನ್ನು ವಶಕ್ಕೆ ಪಡೆದು ಮುಂಬೈ ಕರೆದುಕೊಂಡ ಹೋದ ಘಟನೆ ಶನಿವಾರ ರಾತ್ರಿ ನಡೆದಿದೆ.
ಪಟ್ಟಣದ ಸುಲ್ತಾನ ಸ್ಟ್ರೀಟ್‌ನ ನಿವಾಸಿ ಮಹ್ಮದ್ ಫರಾನ್‌ನನ್ನು ಕಸ್ಟ್ಟಮ್ಸ್ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಈತನ ಮೇಲೆ ಅಕ್ರಮ ಚಿನ್ನ ಸಾಗಾಟ ಮತ್ತು ಮಾರಾಟದ ಆರೋಪವಿದೆ. ಈತನು ಭಟ್ಕಳದ ಒಂದು ಖಾಸಗಿ ಕಚೇರಿಯಲ್ಲಿ ವಿಮಾನದ ಟಿಕೆಟ್‌ಗಳನ್ನು ಬುಕ್ ಮಾಡುತ್ತಿದ್ದ ಎನ್ನಲಾಗಿದೆ. ವಿದೇಶಕ್ಕೆ ಗೋವಾ ಅಥವಾ ಮಂಗಳೂರು ನಿಲ್ದಾಣದಿಂದ ಟಿಕೆಟ್ ಬುಕ್ ಮಾಡಿ ಅಲ್ಲಿಂದ ತೆರಳದೆ ಮುಂಬೈನಿಂದ ವಿದೇಶಕ್ಕೆ ತೆರಳುತ್ತಿದ್ದ. ಅಲ್ಲಿಂದ ಅಕ್ರಮವಾಗಿ ತಂದ ಚಿನ್ನವನ್ನು ಮಾರಾಟ ಮಾಡುತ್ತಿದ್ದ. ಈತನಿಂದ ಚಿನ್ನ ಪಡೆದ ವ್ಯಕ್ತಿಯೊರ್ವ ಕೆಲವು ದಿನಗಳ ಹಿಂದೆ ಪುಣೆಯ ಕಸ್ಟಮ್ಸ್ ಅಧಿಕಾರಿಗಳ ಬಲೆಗೆ ಬಿದ್ದಿದ್ದ. ಆತನು ನೀಡಿದ ಮಾಹಿತಿ ಪ್ರಕಾರ ಪುಣೆಯ ಕಸ್ಟ್ಟಮ್ಸ್ ಅಧಿಕಾರಿಗಳು ಭಟ್ಕಳದ ಆರೋಪಿಯ ಮನೆಯ ಮೇಲೆ ದಾಳಿ ನಡೆಸಿದ್ದಾರೆ.
ಭಟ್ಕಳದ ಕಸ್ಟಮ್ಸ್ ಅಧಿಕಾರಿಗಳೊಂದಿಗೆ ಸ್ಥಳೀಯ ಪೊಲೀಸರ ಸಹಾಯ ಪಡೆದು ಬೆಳಿಗ್ಗೆಯಿಂದಲೆ ಸುಲ್ತಾನ ಸ್ಟ್ರೀಟ್‌ನಲ್ಲಿರುವ ಮನೆಯ ಮೇಲೆ ಪುಣೆಯ ಅಧಿಕಾರಿಗಳು ಹುಡುಕಾಟ ಆರಂಭಿಸಿದ್ದರು. ಮನೆಯಲ್ಲಿ ನಗನಗದು ಪತ್ತೆಯಾಗಿಲ್ಲಾವಾದರೂ ಅಧಿಕಾರಿಗಳು ಕೇಳಿದ ಪ್ರಶ್ನೆಗಳಿಗೆ ಸರಿಯಾದ ಉತ್ತರ ನೀಡದ ಕಾರಣ ಆರೋಪಿಯ ಆಧಾರ ಕಾರ್ಡ ಮತ್ತಿತರ ದಾಖಲೆಗಳ ಸಮೇತ ವಶಕ್ಕೆ ಪಡೆದು ಕಮಿಷನರ್ ಸೂಚನೆ ಮೆರೆಗೆ ಭಟ್ಕಳದ ವ್ಯಕ್ತಿಯನ್ನು ಮುಂಬೈಗೆ ಕರೆದೊಯ್ದಿದ್ದಾರೆ.
ವಿವಿಧ ಆಯಾಮಗಳಲ್ಲಿ ತನಿಖೆ ಮುಂದುವರೆದಿದೆ. ಈತನ ಮೇಲೆ ಇನ್ನು ಹಲವು ಪ್ರಕರಣಗಳು ಇದೆ ಎನ್ನಲಾಗಿದೆ. ಕಾರ್ಯಚರಣೆಯಲ್ಲಿ ಪುಣೆಯ ಜಾಯಿಂಟ್ ಕಮಿಷನರ್, ಇಬ್ಬರು ಇನ್ಸಪೆಕ್ಟರ್‌ಗಳು ಸೇರಿ ಅವರ ಸಹಾಯಕರು ಇದ್ದರು.
ವಿಸ್ಮಯ ನ್ಯೂಸ್ ಉದಯ್ ಎಸ್ ನಾಯ್ಕ ಭಟ್ಕಳ