ಕಾರವಾರ: ಉತ್ತರಕನ್ನಡ ಜಿಲ್ಲೆಯ ಹಲವೆಡೆ ಅಕಾಲಿಕ ಮಳೆ ಸುರಿದಿದೆ. ಕುಮಟಾ, ಹೊನ್ನಾವರ, ಅಂಕೋಲಾ, ಕಾರವಾರ, ಭಟ್ಕಳದ ಹಲವೆಡೆ ಮಳೆಯಾಗಿದೆ. ಹೊನ್ನಾವರ ತಾಲೂಕಿನ ಕೆಲ ಭಾಗಗಳಲ್ಲಿ ಬುಧವಾರ ಮಧ್ಯಾಹ್ನ 2 ಗಂಟೆ ಸುಮಾರಿಗೆ ಅಕಾಲಿಕ ಮಳೆಯಾಗಿದ್ದು, ರೈತರ ಹುಲ್ಲಿನ ಗೊಣಬೆ, ಅಡಿಕೆ ಮಳೆ ನೀರಿಗೆ ಸಿಲುಕಿ ಹಾನಿ ಸಂಭವಿಸಿದೆ. ತಾಲೂಕು ವ್ಯಾಪ್ತಿಯ ಚಂದಾವರ, ಮಲ್ಲಾಪುರ, ಕಡ್ನೀರು, ಹೊದ್ಕೆ ಶಿರೂರು, ಹಳ್ಳಿಮೂಲೆ, ಕಡತೋಕಾ ಸೇರಿದಂತೆ ಇನ್ನೂ ಕೆಲ ಭಾಗಗಳಲ್ಲಿ ಅರ್ಧ ಗಂಟೆಗಳ ಕಾಲ ಮಳೆಯಾಗಿರುವುದು ಕಂಡುಬoದಿದೆ.
ಅಕಾಲಿಕ ಮಳೆಯಿಂದಾಗಿ ರೈತರ ಒಣ ಮೇವಿನ ಗೊಣಬೆ, ಮನೆಯ ಮಹಡಿಯಲ್ಲಿ ಒಣಗಿಸಲು ಹಾಕಲಾದ ಅಡಿಕೆ ಮಳೆ ನೀರಿಗೆ ಸಿಲುಕಿದೆ. ಅನೇಕ ಕಡೆ ರೈತರು ಹುಲ್ಲಿನ ಗೊಣಬೆ ಸೆಳೆಯಲು ಆರಂಭಿಸಿದ್ದರಿoದ ರೈತರ ಭತ್ತ, ಹುಲ್ಲು ಮಳೆಗೆ ಸುಲುಕಿರುವುದು ರೈತರಲ್ಲಿ ಆತಂಕವನ್ನುoಟು ಮಾಡಿದೆ.
ಜನವರಿಯ ಪ್ರಾರಂಭದಲ್ಲಿ ಸುರಿದ ಅಕಾಲಿಕ ಮಳೆ ಬೇಸಿಗೆಯ ಬೆಳೆಗಳ ಮೇಲೆ ದುಷ್ಪರಿಣಾಮ ಉಂಟು ಮಾಡಲಿದೆ. ಕರಾವಳಿ ಭಾಗದ ಪ್ರಮುಖ ಬೆಳೆ ಗೇರು ಹೂ ಉದುರಿ ಬೆಳೆ ನಾಶವಾಗಬಹುದಾದ ಸಾಧ್ಯತೆ ಇದೆ.
ಮಾವು ಸಹ ಹೂ ಬಿಟ್ಟಿದ್ದು ಬೆಳೆಗೆ ಹೊಡೆತ ಬೀಳಲಿದೆ. ಪ್ರಮುಖ ಬೆಳೆಯಾದ ಅಡಿಕೆ, ತೆಂಗು ಸಿಂಗಾರದಲ್ಲಿ ಮಳೆಯ ನೀರು ಸಿಕ್ಕಿ ಬೆಳೆ ಹಾನಿ ಸಂಭವಿಸಬಹುದಲ್ಲದೆ ಅಸಹಜ ವಾತಾವರಣದಿಂದ ಬೆಳೆಗಳು ಹಾಳಾಗುತ್ತಿರುವುದು ರೈತ ವಲಯದಲ್ಲಿ ಆತಂಕ ಮೂಡಿಸಿದೆ.
ವಿಸ್ಮಯ ನ್ಯೂಸ್, ಹೊನ್ನಾವರ