Follow Us On

Google News
Uttara Kannada
Trending

ಮನೆಯಲ್ಲಿ ಮದುವೆಗೆ ಒಪ್ಪಿಗೆ ನೀಡಿದರೂ ಸಾವಿಗೆ ಶರಣಾದ ಯುವಪ್ರೇಮಿಗಳು

ಸ್ವಲ್ಪದಿನದ ಬಳಿಕ ಮದುವೆ ಮಾಡಿಕೊಡುವುದಾಗಿ ಮನೆಯವರು ಹೇಳಿದ್ದರು
ಆದರೂ ದುಡುಕಿನ ನಿರ್ಧಾರ ಕೈಗೊಂಡ ಯುವ ಪ್ರೇಮಿಗಳು

ಶಿರಸಿ: ಆಕೆ ಅತಿಥಿ ಉಪನ್ಯಾಸಕಿ, ಈತ ಖಾಸಗಿ ಉದ್ಯೋಗಿ. ಇವರಿಬ್ಬರು ತುಂಬಾನೇ ಪ್ರೀತಿಸುತ್ತಿದ್ದರು. ಹಲವಾರು ವರ್ಷಗಳಿಂದ ಪ್ರೀತಿಸುತ್ತಿದ್ದವರಿಗೆ ಮನೆಯವರು ಎಲ್ಲಿ ಮದುವೆ ಮಾಡಿ ಕೊಡುವುದಿಲ್ಲವೇ ಎಂಬ ಭಯ ಕಾಡುತ್ತಿತ್ತು. ಈ ಭಯವೇ ಇವರನ್ನು ಸಾವಿನ ದವಡೆಗೆ ನೂಕಿದೆ. ಹೌದು, ಮನೆಯಲ್ಲಿ ಮದುವೆ ಮಾಡಿಕೊಡುತ್ತೇನೆ ಎಂದು ಹೇಳಿದರೂ ಮನೆಯವರು ಮಾಡಿಕೊಡುವುದಿಲ್ಲವೇನೋ ಎಂಬ ಭಯಕ್ಕೆ ಯುವ ಪ್ರೇಮಿಗಳಿಬ್ಬರು ಸಾವಿಗೆ ಶರಣಾದ ಘಟನೆ ತಾಲೂಕಿನ ಹೆಬ್ರೆ ಬೆಟ್ಟದಲ್ಲಿ ನಡೆದಿದೆ.

ಮೇಘನಾ ಮತ್ತು ವಿಕ್ರಮ ಹಲವಾರು ವರ್ಷಗಳಿಂದ ಪ್ರೀತಿಸುತ್ತಿದ್ದರು. ಇವರ ಮದುವೆಗೆ ಮನೆಯಲ್ಲಿ ಒಪ್ಪಿಗೆ ಕೂಡಾ ಸಿಕ್ಕಿತ್ತು. ಸ್ವಲ್ಪ ದಿನಗಳ ನಂತರ ಮದುವೆ ಮಾಡಿಕೊಡುವುದಾಗಿ ಕುಟುಂಬಸ್ಥರು ತಿಳಿಸಿದ್ದರು. ಆದರೆ ಎಲ್ಲಿ ಮದುವೆ ಮಾಡಿಕೊಡುವುದಿಲ್ಲವೇನೋ ಎಂದು ತಪ್ಪು ತಿಳಿದು, ಅದನ್ನೇ ಮನಸ್ಸಿಗೆ ಹಚ್ಚಿಕೊಂಡು ಇಬ್ಬರೂ ಸಾವಿಗೆ ಶರಣಾಗಿದ್ದಾರೆ. ಶಿರಸಿ ತಾಲೂಕಿನ ತೆರಕನಹಳ್ಳಿಯ ಮೇಘನಾ ನಾಯ್ಕ (27) ಹಾಗೂ ಹುಸುರಿಯ ಬೊಬ್ಬನಕೊಡ್ಲಿನ ವಿಕ್ರಮ ಮಾವಿನಕುರ್ವೆ (28) ಸಾವಿಗೆ ಶರಣಾದ ಯುವ ಪ್ರೇಮಿಗಳಾಗಿದ್ದಾರೆ. ಮೇಘನಾ ಅತಿಥಿ ಉಪನ್ಯಾಸಕಿಯಾಗಿದ್ದು, ವಿಕ್ರಮ್ ಖಾಸಗಿ ಉದ್ಯೋಗದಲ್ಲಿ ತೊಡಗಿಕೊಂಡಿದ್ದನು.

ಹೆಬ್ರೆ ಬೆಟ್ಟದಲ್ಲಿ ಗಿಡವೊಂದರಲ್ಲಿ ಇಬ್ಬರ ಶವ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ. ಶಿರಸಿ ಗ್ರಾಮೀಣ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಶವವನ್ನು ಸರ್ಕಾರಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ.

ಮಗನಸಾವಿನ ಬೆನ್ನಲ್ಲೆ ತಂದೆಯ ಸಾವು:

ವಿಪರ್ಯಾಸ ನೋಡಿ, ಪ್ರೀತಿಸಿದ ಯುವತಿಯ ಜೊತೆ ತಾಲೂಕಿನ ಬೆಣ್ಣೆಹೊಳೆ ಸಮೀಪದ ಅರಣ್ಯ ಪ್ರದೇಶದಲ್ಲಿ ಸಾವನ್ನಪ್ಪಿದ್ದ ಮಗನಸ್ಥಿತಿಯನ್ನು ತಂದೆಗೆ ಸಹಿಸಲಾಗಲಿಲ್ಲ. ಮಗನ ಸಾವಿನ ಆಘಾತದಿಂದಾಗಿ ಆತನ ತಂದೆ ಕೂಡಾ ಸಾವು ಕಂಡಿದ್ದಾರೆ. ಗಣೇಶ ಶಂಕರ ಮಾವಿನಕುರ್ವೆ ಎಂಬುವರೇ ಸಾವು ಕಂಡ ದುರ್ದೈವಿಯಾಗಿದ್ದಾರೆ. ರವಿವಾರ ಇವರ ಮಗ , ತಾನು ಪ್ರೀತಿಯ ಯುವತಿಯೊಂದಿಗೆ ಸಾವಿಗೆ ಶರಣಾಗಿದ್ದ, ಇದರಿಂದ ತೀವ್ರ ಮನನೊಂದ ತಂದೆ ವಿಷಸೇವಿಸಿಯೋ ಅಥವಾ ಇನ್ಯಾವುದೇ ಕಾರಣಕ್ಕೋ ಒದ್ದಾಡುತ್ತಿದ್ದಾಗ ಅವರನ್ನು ನಗರ ಟಿ.ಎಸ್.ಎಸ್. ಆಸ್ಪತ್ರೆಗೆ ತಂದರೂ ಚಿಕಿತ್ಸೆ ಫಲಕಾರಿಯಾಗದೇ ಸಾವು ಕಂಡಿದ್ದಾರೆ.

ಬನವಾಸಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪಿ.ಎಸ್.ಐ. ಮಹಂತೇಶ ನಾಯಕ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ. ಮಗನ ಸಾವಿನ ನೋವನ್ನು ಅರಗಿಸಿಕೊಳ್ಳಲಾಗದೇ ಆ ಆಘಾತದಿಂದಲೇ ಸಾವು ಸಂಭವಿಸಿರಬೇಕು ಎಂದು ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ಕಂಡು ಬಂದಿದೆ. ಆದರೆ, ವಿಷ ಸೇವಿಸಿದ್ದಾರೊ? ಅಥವಾ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೋ ಎಂಬುದು ಇನ್ನು ತಿಳಿದುಬಂದಿಲ್ಲ.

ವಿಸ್ಮಯ ನ್ಯೂಸ್, ಶಿರಸಿ

Back to top button