ಮನೆ-ಮನೆಗೆ ಗಂಗೆ :ಪಿಎಂ ಮೋದಿ ಯೋಜನೆ. ಜೆಜೆಎಂ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಶಾಸಕಿ ರೂಪಾಲಿ ನಾಯ್ಕ
ಕಾರವಾರ ಜುಲೈ 16: ಮನೆ ಮನೆಗೆ ಗಂಗೆ ಎಂಬ ಘೋಷ ವಾಕ್ಯದೊಂದಿಗೆ ಪ್ರತಿಮನೆಗೆ ನಲ್ಲಿ ಸಂಪರ್ಕ ಜೋಡಿಸಿ ನೀರಿನ ಸಮಸ್ಯೆ ಬಗೆಹರಿಸಲು ಪ್ರಧಾನಿ ನರೇಂದ್ರ ಮೋದಿಯವರು ರೂಪಿಸಿರುವ ಕನಸಿನ ಯೋಜನೆ ರಾಷ್ಟ್ರೀಯ ಜಲಜೀವನ್ ಮಿಷನ್ ( ಜೆ. ಜೆ. ಎಂ) ಕಾರವಾರ ಮತ್ತು ಅಂಕೋಲಾ ತಾಲೂಕುಗಳಲ್ಲಿ ಯಶಸ್ವಿಯಾಗಿ ಕಾರ್ಯರೂಪಕ್ಕೆ ತರಬೇಕಾಗಿದ್ದು ,ಯೋಜನೆ ಸಾಕಾರಗೊಳಿಸಲು ಎಲ್ಲರೂ ಗಂಭೀರವಾಗಿ ಪ್ರಯತ್ನಿಸಬೇಕು ಎಂದು ಕಾರವಾರ ಅಂಕೋಲಾ ಕ್ಷೇತ್ರದ ಶಾಸಕಿ ರೂಪಾಲಿ ನಾಯ್ಕ ಅವರು ಹೇಳಿದರು.
ಜಿಲ್ಲಾ ಪಂಚಾಯತಿ ಸಭಾ ಭವನದಲ್ಲಿ ಶುಕ್ರವಾರ ನಡೆದ ಕಾರವಾರ ಅಂಕೋಲಾ ತಾಲೂಕುಗಳ ಜೆ.ಎಂ.ಜೆ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಶಾಸಕಿ ರೂಪಾಲಿ ನಾಯ್ಕ, ಬೇಸಿಗೆಯಲ್ಲಿ ಗ್ರಾಮೀಣ ಪ್ರದೇಶಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ತೀವ್ರವಾಗಿರುತ್ತದೆ, ಈ ಹಿಂದೆ ನೀರು ಪೂರೈಕೆಗೆ ಸಂಬಂಧಿಸಿದಂತೆ ಬಂದ ಹಲವು ಯೋಜನೆಗಳ ಸಮರ್ಪಕ ಅನುಷ್ಠಾನವಾಗದೇ ನೀರಿನ ಸಮಸ್ಯೆ ಮುಂದುವರೆ ಯು ವಂತಾಗಿದೆ ಆದರೆ ಯಾವುದೇ ಕಾರಣಕ್ಕೂ ಜೆ.ಎಂ.ಜೆ ಯೋಜನೆ ಅನುಷ್ಠಾನದಲ್ಲಿ ನಿರ್ಲಕ್ಷ್ಯ ಆಗಬಾರದು ಎಂದರು.
ಯೋಜನೆಯ ಸಮೀಕ್ಷೆಗೆ ಅಂಕೋಲಾದಲ್ಲಿ ಒಂದು ತಂಡ ರಚಿಸಿದಂತೆ, ಕಾರವಾರದಲ್ಲಿಯೂ ಸಮೀಕ್ಷಾ ತಂಡ ರಚಿಸಿ ಕಣ್ಗಾವಲು ಇಡಬೇಕು., ಕಳೆದ ವರ್ಷ ಕಾಮಗಾರಿಯಲ್ಲಿ ಆದ ತೊಡಕಗಳು ಈ ವರ್ಷ ಪುನರಾವರ್ತನೆ ಆಗಬಾರದು ಎಂದು ಶಾಸಕಿ ರೂಪಾಲಿ ನಾಯ್ಕ ಸೂಚಿಸಿದರು.
ಜಿಲ್ಲಾ ಪಂಚಾಯತಿ ಕಾರ್ಯನಿರ್ವಹಣ ಅಧಿಕಾರಿ ಪ್ರಿಯಾಂಕಾ. ಎಂ, ತಾ.ಪಂ ಕಾರ್ಯನಿರ್ವಹಣಾಧಿಕಾರಿಗಳಾದ ಅನಂದ ಕುಮಾರ ಕಾರವಾರ, ಪಿ ವೈ ಸಾವಂತ ಅಂಕೋಲಾ, ಗ್ರಾಮೀಣ ನೀರು ಮತ್ತು ನೈರ್ಮಲ್ಯ ಇಲಾಖೆಯ ಕಾರವಾರ ವಿಭಾಗದ ಕಾರ್ಯನಿರ್ವಾಹಕ ಇಂಜಿನಿಯರ್ ಕಿರಣ್ ಕೇಳಕರ ಸೇರಿದಂತೆ ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳು ಸಿಬ್ಬಂದಿಗಳು, ಕಾರವಾರ ಹಾಗೂ ಅಂಕೋಲಾ ತಾಲೂಕುಗಳ ವಿವಿಧ ಗ್ರಾಮ ಪಂಚಾಯಿತಿಗಳ ಅಭಿವೃದ್ಧಿ ಅಧಿಕಾರಿಗಳು ಮತ್ತು ಅಧ್ಯಕ್ಷರು ಸಭೆಯಲ್ಲಿ ಹಾಜರಿದ್ದರು.
ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ