ಅಂಕೋಲಾ: ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಕೋಗ್ರೆ ಬೊಮ್ಮಯ್ಯ ದೇವರಿಗೆ 6 ಶತಮಾನಗಳಿ ಗಿಂತಲೂ ಪ್ರಾಚೀನವಾದ ಭವ್ಯ ಪರಂಪರೆಯಿದ್ದು, ಈ ಕ್ಷೇತ್ರವು ಅತ್ಯಂತ ರಮಣೀಯ ಮತ್ತು ಪವಿತ್ರ ಧಾರ್ಮಿಕ ಕ್ಷೇತ್ರಗಳಲ್ಲಿ ಒಂದಾಗಿದೆ. ಶ್ರೀ ಕೋಗ್ರೆ ಬೊಮ್ಮಯ್ಯ ದೇವರ ನೂತನ ಶಿಲಾದೇಗುಲ ಕಾರ್ಯ ಆರಂಭವಾಗಿದ್ದು, ಶ್ರೀ ಕ್ಷೇತ್ರ ಮತ್ತು ಪರಿವಾರ ದೇವತೆಗಳ ರಂಗ ಪೂಜೆ ಕಾರ್ಯಕ್ರಮ ವಿಜ್ರಂಭಣೆಯಿಂದ ನಡೆಯಿತು. ಕಾರವಾರ-ಅಂಕೋಲಾ ಕ್ಷೇತ್ರದ ಶಾಸಕಿ ರೂಪಾಲಿ ನಾಯ್ಕ ಪೂಜೆಯಲ್ಲಿ ಪಾಲ್ಗೊಂಡು ದೇವಸ್ಥಾನದ ಅಭಿವೃದ್ಧಿಗೆ ಸಹಕರಿಸುವುದಾಗಿ ಭರವಸೆ ನೀಡಿದರು.
ರಾಜ್ಯದಲ್ಲಿಯೇ ಪ್ರಸಿದ್ದವಾದ ಕೋಗ್ರೆ ಬಂಡಿ ಹಬ್ಬಕ್ಕೆ ತನ್ನದೇ ಆದ ವೈಶಿಷ್ಠ್ಯತೆಯಿದ್ದು, ಕೋಗ್ರೆ ಬೊಮ್ಮಯ್ಯ ದೇವರು ಇತರೇ ಅಧಿದೇವತೆಗಳಾದ ಅಮ್ಮನ್ನವರು, ಉಲಿಬೀರ, ಮಾಣಬೀರ, ರಾಕೇಶ್ವರ, ಬೇಡ-ಬೇಡ್ತಿ, ಬೀರ, ಬಂಡಾರ, ಈಶ್ವರ, ಮಹಾಸತಿ, ಅಚ್ಚಕನ್ಯೆ-ದೇವಕನ್ಯೆ, ನಾಗದೇವತೆ ಮುಂತಾದ ಪರಿವಾರ ದೇವತೆಗಳೊಂದಿಗೆ ಅನಾಧಿಕಾಲದಿಂದ ನೆಲೆನಿಂತು ಭಕ್ತರನ್ನು ಕಾಪಡುತ್ತಿದೆ.
ಬೊಮ್ಮಯ್ಯ ದೇವರ ಗುಡಿಯು ಶಿಥಿಲಾವಸ್ಥೆಯಲಿದ್ದು, ಭಕ್ತರ ಸಹಕಾರದಲ್ಲಿ ನೂತನ ಶಿಲಾದೇಗುಲಾ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ. ಸುಮಾರು 4 ಕೋಟಿ ರೂ. ಅಂದಾಜು ವೆಚ್ಚದಲ್ಲಿ ನೂತನ ಶಿಲಾ ದೇಗುಲ, ಪರಿವಾರ ದೇಗಲುಗಳ ಗುಡಿನಿರ್ಮಾಣ, ದೇವಸ್ಥಾನಕ್ಕೆ ಬರಲು ಹೊಸ ಮೆಟ್ಟಿಲುಗಳ ನಿರ್ಮಾ ಣ, ರಸ್ತೆ, ಜಾತ್ರಾ ಮೈದಾನ ಮುಂತಾದ ಅಭಿವೃದ್ಧಿ ಕಾರ್ಯಗಳ ನೀಲನಕ್ಷೆ ಸಿದ್ದವಾಗಿದ್ದು, ಹಂತ ಹಂತ ವಾಗಿ ಕಾರ್ಯಕೈಗೊಳ್ಳಲು ದೇಗುಲ ನವೀಕರಣ ಸಮಿತಿ ಕಾರ್ಯಪ್ರವೃತ್ತವಾಗಿದೆ. ಶ್ರೀ ದೇವರು ಮತ್ತು ಅಮ್ಮನ್ನವರ ಗುಡಿಯಲ್ಲಿ ರಂಗ ಪೂಜೆ ವಿಶೇಷ ಕಾರ್ಯಕ್ರಮ ನಡೆಯಿತು. ಶ್ರೀ ದೇವರನ್ನು ಸರ್ವಾಲಂಕಾರಗೊಳಿಸಲಾಗಿತ್ತು.
ತಾಲೂಕಿನ ವಿವಿಧ ಅಭಿವೃದ್ಧಿ ಕಾರ್ಯಗಳ ಗುದ್ದಲಿ ಪೂಜೆ ಮತ್ತು ಉದ್ಘಾಟನೆಗೆ ಆಗಮಿಸಿದ್ದ ಶಾಸಕಿ ರೂಪಾಲಿ ನಾಯ್ಕ ಕೋಗ್ರೆ ಬೊಮ್ಮಯ್ಯ ದೇವಸ್ಥಾನಕ್ಕೆ ಆಗಮಿಸಿ ಶ್ರೀ ದೇವರ ದರ್ಶನ ಪಡೆದುಕೊಂಡರು. ಶಾಸಕಿ ರೂಪಾಲಿ ನಾಯ್ಕ ದೇವಸ್ಥಾ ನದ ರಸ್ತೆ ನಿರ್ಮಾಣಕ್ಕೆ ಈ ಹಿಂದೆ 10 ಲಕ್ಷ ರೂ. ಮಂಜೂರಿ ಮಾಡಿ ರಸ್ತೆ ಕಾಮಗಾರಿ ಸಹ ಪೂರ್ಣ ಗೊಂಡ ಹಿನ್ನಲೆಯಲ್ಲಿ ಮತ್ತು ಮುಂಬರು ದಿನಗಳಲ್ಲಿ ಕ್ಷೇತ್ರದ ಅಭಿವೃದ್ಧಿಗೆ ಕೈಜೋಡಿಸುವುದಾಗಿ ಹೇಳಿರು ವುದು ಸ್ಥಳೀಯರ ಸಂತಸಕ್ಕೆ ಕಾರಣವಾಯಿತು.
ದೇಗುಲ ನವೀಕರಣ ಸಮಿತಿಯವರು ಈ ಹಿಂದೆಯೇ ನನ್ನನ್ನು ಭೇಟಿಯಾಗಿ ನೂತನ ದೇಗುಲ ನಿರ್ಮಾಣದ ಕುರಿತು ತಿಳಿಸಿದ ಪ್ರಕಾರ ನಾನು ಸರಕಾರದಿಂದ 1 ಕೋಟಿ ರೂ. ಅನುದಾನಕ್ಕೆ ಪ್ರಸ್ತಾವನೆ ಕಳುಹಿಸಿದ್ದು, ಇತ್ತೀಚಿಗೆ ಅಂಕೋಲಾಕ್ಕೆ ಬಂದ ಮುಜರಾಯಿ ಸಚಿವರಾದ ಕೋಟಾ ಶ್ರೀನಿವಾಸ ಪೂಜಾರಿ ಅವರಲ್ಲಿಯೂ ಶ್ರೀ ಕ್ಷೇತ್ರದ ಮಹಿಮೆ ಮತ್ತು ಅಭಿವೃದ್ಧಿ ಕುರಿತು ಮನವರಿಕೆ ಮಾಡಿಕೊಟ್ಟಿದ್ದೇನೆ . -ರೂಪಾಲಿ ನಾಯ್ಕ, ಶಾಸಕರು
ತಹಶೀಲ್ದಾರ ಉದಯ ಕುಂಬಾರ, ಸಿಪಿಐ ಕೃಷ್ಣಾನಂದ ನಾಯಕ, ತಾ.ಪಂ. ಕಾರ್ಯನಿರ್ವಹಕಾಧಿಕಾರಿ ಪಿ.ವೈ.ಸಾವಂತ, ಪುರಸಭೆ ಮುಖ್ಯಾಧಿಕಾರಿ ಬಿ.ಪ್ರಲ್ಹಾದ್ ಮತ್ತಿತರರು ಶ್ರೀದೇವರ ದರ್ಶನ ಪಡೆದರು.
ದೇಗುಲ ನವೀಕರಣ ಸಮಿತಿಯ ಅಧ್ಯಕ್ಷ ದೇವಾನಂದ ಬಿ. ಗಾಂವಕರ, ಶಾಸಕಿಯವರನ್ನು ಮತ್ತು ದೇವಸ್ಥಾನ ಅಭಿವೃದ್ಧಿಗೆ ಸಹಕರಿಸುತ್ತಿರುವ ಸುತ್ತಮುತ್ತಲಿನ ಸರ್ವ ಭಕ್ತಮಹನೀಯರನ್ನು ವಂದಿಸಿದರು. ಈ ಸಂದರ್ಭದಲ್ಲಿ ಆಡಳಿತ ಮಂಡಳಿ ಪ್ರಮುಖರು, ಅರ್ಚಕರು, ಸುತ್ತಮುತ್ತಲ ಹಳ್ಳಿಗಳ ಮುಖಂಡರು, ಭಕ್ತರು, ಸಾರ್ವಜನಿಕರು ಪಾಲ್ಗೊಂಡಿದ್ದರು.
–ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ