Focus News
Trending

ಮೂರಿನಕಟ್ಟೆ ವಿವಾದ : ಸಹಜ ಸ್ಥಿತಿಯತ್ತ ಭಟ್ಕಳ

ಭಟ್ಕಳ: ಮೂರಿನಕಟ್ಟೆ ವಿವಾದದ ಬಳಿಕ ಕೆಲ ದಿನಗಳಿಂದ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದ್ದ ಭಟ್ಕಳ ತಾಲೂಕು ಇದೀಗ ಕ್ರಮೇಣ ಸಹಜ ಸ್ಥಿತಿಯತ್ತ ಮರಳುತ್ತಿದೆ. ಸೂಕ್ಷ್ಮ ಪ್ರದೇಶವೆಂದು ಪರಿಗಣಿಸಲ್ಪಡುವ ಭಟ್ಕಳದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ಕಟ್ಟೆಚ್ಚರ ವಹಿಸಿದ್ದು, ತಾಲೂಕಿನಾದ್ಯಂತ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ. ಪ್ರಮುಖ ರಸ್ತೆ, ಮಾರುಕಟ್ಟೆ ಪ್ರದೇಶಗಳು, ಮೊಹಲ್ಲಾಗಳು, ಧಾರ್ಮಿಕ ಸ್ಥಳಗಳು ಹಾಗೂ ಜನಸಂದಣಿ ಹೆಚ್ಚಿರುವ ಪ್ರದೇಶಗಳಲ್ಲಿ ಹೆಚ್ಚುವರಿ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ತಾಲೂಕಿನ ಪ್ರತಿಯೊಂದು ಬೆಳವಣಿಗೆಯ ಮೇಲೂ ಪೊಲೀಸರು ಹದ್ದಿನ ಕಣ್ಣಿಟ್ಟಿದ್ದು, ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡಲು ನಿರಂತರ ನಿಗಾ ವಹಿಸುತ್ತಿದ್ದಾರೆ.

ಪರಿಸ್ಥಿತಿಯನ್ನು ನಿಕಟವಾಗಿ ಅವಲೋಕಿಸಲು ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳದಲ್ಲೇ ಮೊಕ್ಕಾಂ ಹೂಡಿದ್ದು, ಭದ್ರತಾ ವ್ಯವಸ್ಥೆಗಳ ಮೇಲ್ವಿಚಾರಣೆ ನಡೆಸುತ್ತಿದ್ದಾರೆ. ಯಾವುದೇ ವದಂತಿ, ಪ್ರಚೋದನಾತ್ಮಕ ಚಟುವಟಿಕೆ ಅಥವಾ ಕಾನೂನು ಸುವ್ಯವಸ್ಥೆಗೆ ಧಕ್ಕೆ ಉಂಟುಮಾಡುವ ಪ್ರಯತ್ನಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.

ಇದೇ ವೇಳೆ ಸಾರ್ವಜನಿಕರಲ್ಲಿ ಆತ್ಮವಿಶ್ವಾಸ ಮೂಡಿಸುವ ಹಾಗೂ ಶಾಂತಿ ಸುವ್ಯವಸ್ಥೆ ಕಾಪಾಡುವ ಉದ್ದೇಶದಿಂದ ಭಟ್ಕಳ ನಗರದ ಪ್ರಮುಖ ರಸ್ತೆ, ಬೀದಿಗಳು ಹಾಗೂ ವಿವಿಧ ಮೊಹಲ್ಲಾಗಳಲ್ಲಿ ಪೊಲೀಸ್ ಇಲಾಖೆ ವತಿಯಿಂದ ರೂಟ್ ಮಾರ್ಚ್ ನಡೆಸಲಾಯಿತು. ಹಿರಿಯ ಅಧಿಕಾರಿಗಳ ನೇತೃತ್ವದಲ್ಲಿ ನಡೆದ ಈ ರೂಟ್ ಮಾರ್ಚ್ನಲ್ಲಿ ಪೊಲೀಸ್ ಸಿಬ್ಬಂದಿ, ವಿಶೇಷ ಪಡೆಯ ಸಿಬ್ಬಂದಿ ಸೇರಿದಂತೆ ಹಲವು ಭದ್ರತಾ ಸಿಬ್ಬಂದಿ ಭಾಗವಹಿಸಿದರು.

ರೂಟ್ ಮಾರ್ಚ್ ವೇಳೆ ಸಾರ್ವಜನಿಕರಿಗೆ ಶಾಂತಿ ಕಾಪಾಡುವಂತೆ ಮನವಿ ಮಾಡಲಾಗಿದ್ದು, ಯಾವುದೇ ವದಂತಿಗಳಿಗೆ ಕಿವಿಗೊಡದಂತೆ ಹಾಗೂ ಅನುಮಾನಾಸ್ಪದ ಚಟುವಟಿಕೆಗಳ ಬಗ್ಗೆ ತಕ್ಷಣ ಪೊಲೀಸರಿಗೆ ಮಾಹಿತಿ ನೀಡುವಂತೆ ಸೂಚಿಸಲಾಯಿತು. ವ್ಯಾಪಾರ ವಹಿವಾಟು, ಸಾರ್ವಜನಿಕ ಸಂಚಾರ ಹಾಗೂ ದೈನಂದಿನ ಚಟುವಟಿಕೆಗಳು ಸಹಜ ಸ್ಥಿತಿಗೆ ಮರಳುತ್ತಿರುವುದು ಕಂಡುಬAದಿದ್ದು, ಜನತೆ ಕೂಡ ಆಡಳಿತದ ಕ್ರಮಗಳಿಗೆ ಸಹಕಾರ ನೀಡುತ್ತಿದ್ದಾರೆ.

ಒಟ್ಟಾರೆ, ಮೂರಿನಕಟ್ಟೆ ವಿವಾದದ ಬಳಿಕ ಭಟ್ಕಳದಲ್ಲಿ ಶಾಂತಿ ಮತ್ತು ಸೌಹಾರ್ದತೆ ಕಾಪಾಡಲು ಪೊಲೀಸ್ ಇಲಾಖೆ ಹಾಗೂ ಜಿಲ್ಲಾಡಳಿತ ಕೈಗೊಂಡಿರುವ ಮುನ್ನೆಚ್ಚರಿಕಾ ಕ್ರಮಗಳು ಪರಿಣಾಮಕಾರಿಯಾಗಿ ಮುಂದುವರಿದಿದ್ದು, ಪರಿಸ್ಥಿತಿ ಸಂಪೂರ್ಣ ನಿಯಂತ್ರಣದಲ್ಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವಿಸ್ಮಯ ನ್ಯೂಸ್, ಈಶ್ವರ್ ನಾಯ್ಕ, ಭಟ್ಕಳ

Back to top button