ಸುಮಾರು 4 ವರ್ಷಗಳಿಂದ ಶೋ ಪೀಸ್ ನಂತೆ ನಿಂತಿದ್ದ ದಾರಿದೀಪದ ಕಂಬ: ಉದ್ಘಾಟನೆ ಹಾಗೂ ಕಾಮಗಾರಿ ಹಸ್ತಾಂತರಕ್ಕೂ ಮೊದಲೇ ತುಕ್ಕು

ಅಂಕೋಲಾ : ಪುರಸಭೆ ವ್ಯಾಪ್ತಿಯ ಕೆ.ಸಿ ರಸ್ತೆಯ ಅಂಚಿಗೆ ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಅಳವಡಿಸಲಾದ ಬೀದಿ ದೀಪ ಯೋಜನೆ ಆಡಳಿತಾತ್ಮಕ ವೈಫಲ್ಯ ಹಾಗೂ ಕಳಪೆ ಕಾಮಗಾರಿಯ ಉದಾಹರಣೆಯಾಗಿ ಚರ್ಚೆಗೆ ಗ್ರಾಸವಾಗಿದೆ. ಲಕ್ಷಾಂತರ ರೂಪಾಯಿ ವೆಚ್ಚದಲ್ಲಿ ಸುಮಾರು 25 ಕಂಬ ಸಮೇತ ಅಳವಡಿಸಲಾದ ದೀಪಗಳು ಆರಂಭದಿoದಲೇ ಸಮರ್ಪಕವಾಗಿ ಬೆಳಗದೆ, 3-4 ವರ್ಷಗಳ ಕಾಲ ಶೋ ಪೀಸ್ ಗಳಂತೆಯೇ ಉಳಿದಿದ್ದವು ಎನ್ನುವುದು ಸಾರ್ವಜನಿಕರ ಆರೋಪ.
ಪಟ್ಟಣದ ಅತ್ಯಂತ ಜನನಿಬಿಡ ರಸ್ತೆಗಳಲ್ಲೊಂದಾದ ಕೆ.ಸಿ ರಸ್ತೆ ಅಂಚಿಗೆ ಬ್ಯಾಂಕ್‌ಗಳು, ಆಸ್ಪತ್ರೆಗಳು, ಆರೋಗ್ಯಾಧಿಕಾರಿಗಳ ಕಚೇರಿ, ಶಾಲೆ-ಕಾಲೇಜುಗಳು, ವ್ಯಾಪಾರ ಮಳಿಗೆಗಳು ಹಾಗೂ ಧಾರ್ಮಿಕ ಕೇಂದ್ರಗಳು ಇರುವುದರಿಂದ ಇಲ್ಲಿ ಸಾರ್ವಜನಿಕ ಸಂಚಾರ ಹೆಚ್ಚಾಗಿದೆ. ಆದರೂ ದೀಪಗಳು 3-4 ವರ್ಷಗಳಿಂದ ಕಾರ್ಯನಿರ್ವಹಿಸದಿರುವುದು ಜನರ ಅಸಮಾಧಾನಕ್ಕೆ ಕಾರಣವಾಗಿತ್ತು. ಲೋಕೋಪಯೋಗಿ ಇಲಾಖೆ, ರಸ್ತೆ ಅಭಿವೃದ್ಧಿ ಕಾಮಗಾರಿಯ ಜೊತೆ ಈ ಬೀದಿ ದೀಪದ ಯೋಜನೆ ಜಾರಿಗೊಳಿಸಿತ್ತು. ಗುತ್ತಿಗೆದಾರರಿಗೆ ಬಿಲ್ ಪಾವತಿಯಾಗಿದೆಯೆಂದು ಹೇಳಲಾಗುತ್ತಿದ್ದರೂ, ಕಾಮಗಾರಿ ಗುಣಮಟ್ಟ, ತಾಂತ್ರಿಕ ಪರಿಶೀಲನೆ ಹಾಗೂ ಅಧಿಕೃತ ಸ್ವೀಕೃತಿ ಕುರಿತು ಸ್ಪಷ್ಟ ಮಾಹಿತಿ ಇನ್ನೂ ಲಭ್ಯವಾಗಿಲ್ಲ.
ಪುರಸಭೆ ಮೂಲಗಳ ಪ್ರಕಾರ, ಬೀದಿ ದೀಪಗಳ ಅಧಿಕೃತ ಹಸ್ತಾಂತರವೇ ಪುರಸಭೆಗೆ ನಡೆದಿಲ್ಲ.
ಈ ಕುರಿತು ಈ ಹಿಂದಿನ ಹಾಗೂ ಹಾಲಿ ಮುಖ್ಯಾಧಿಕಾರಿಗಳು ಲೋಕೋಪಯೋಗಿ ಇಲಾಖೆಯೊಂದಿಗೆ ಪತ್ರ ವ್ಯವಹಾರ ನಡೆಸಿದ್ದರೂ ಸಮಸ್ಯೆ ಪರಿಹಾರವಾಗಿಲ್ಲ ಎನ್ನಲಾಗಿದೆ. ಈ ಕುರಿತು ವಿಸ್ಮಯ ವಾಹಿನಿ ವಿಸ್ತೃತ ವರದಿಯೊಂದನ್ನು ಪ್ರಕಟಿಸಿತ್ತು. ಬಳಿಕ ಕಳೆದ ಮಾರ್ಚ ಮೊದಲ ವಾರದಲ್ಲಿ ಕರೆದಿದ್ದ ತಾಲೂಕಾ ತ್ರೈಮಾಸಿಕ ಕೆಡಿಪಿ ಸಭೆಯಲ್ಲೂ ಇದೇ ವಿಷಯ ಚರ್ಚೆಗೆ ಬಂದಿದ್ದು, ಶಾಸಕ ಸೈಲ್ ಅಧಿಕಾರಿಗಳಿಗೆ, ವಿಳಂಬ ನೀತಿಗೆ ಕಾರಣ ಕೇಳಿ, ದೀಪ ಬೆಳಗಲು ವ್ಯವಸ್ಥೆ ಸರಿಪಡಿಸಿ ಎಂಬ ಸೂಚನೆ ನೀಡಿದ್ದರು.
ಅದಾದ ಬಳಿಕ 6-7 ಕಂಬಗಳ ಸಂಪರ್ಕ ದುರಸ್ತಿ ಮಾಡಿ ಕೆಲ ದೀಪಗಳು ಬೆಳಗಿದರೆ ಉಳಿದವು ಯಥಾಸ್ಥಿತಿಯಲ್ಲಿದ್ದವು. ಮೇ 20 ರ ತರುವಾಯ ಬಹುತೇಕ ಎಲ್ಲ ಕಂಬಗಳ ದುರಸ್ಥಿ ಕಾರ್ಯದೊಂದಿಗೆ ದೀಪಗಳು ಬೆಳಗಲಾರಂಭಿಸಿದ್ದರಿoದ ಸ್ಥಳೀಯರು ಸಮಾಧಾನಪಡುವಷ್ಟರಲ್ಲಿ, ಮೇ 25ರಂದು ಗಣಪತಿ ದೇವಸ್ಥಾನದ ಪಕ್ಕ ಹಗಲಿನಲ್ಲೇ ಕಂಬವೊoದು ಬುಡ ಸಮೇತ ತುಂಡಾಗಿ ಬಿದ್ದ ಘಟನೆ ಮತ್ತೊಮ್ಮೆ ಯೋಜನೆಯ ಗುಣಮಟ್ಟದ ಬಗ್ಗೆ ಅನುಮಾನ ಹುಟ್ಟಿಸಿದೆ.
ಅದೃಷ್ಟವಶಾತ್ ಸಂಭವನೀಯು ಅಪಾಯ ತಪ್ಪಿದ್ದು ಬಾಲಕನೋರ್ವ ಪಾರಾಗಿದ್ದಾನೆ ಎನ್ನುವುದು ಸ್ಥಳೀಯರ ಮಾತು. ಈ ಕುರಿತು ಪ್ರತ್ಯಕ್ಷ ದರ್ಶಿಯಾಗಿದ್ದ ಬಿಳೆಹೊಂಯ್ಗೆ ಗ್ರಾಮದ ಸಾಮಾಜಿಕ ಕಾರ್ಯಕರ್ತ ಶಾಂತಾ ಹರಿಕಂತ್ರ ವಿಸ್ಮಯ ವಾಹಿನಿಯೊಂದಿಗೆ ತಾವು ಕಂಡ ಘಟನಾವಳಿ ಬಗ್ಗೆ ತಿಳಿಸಿ ,ಅವ್ಯವಸ್ಥೆ ಸರಿಪಡಿಸುವಂತೆ ಅಗ್ರಹಿಸಿದರು . ಕಂಬದ ಬುಡ ಭಾಗದಲ್ಲಿ ತುಕ್ಕು ಕಾಣಿಸಿಕೊಂಡಿರುವುದು ಕಳಪೆ ಸಾಮಗ್ರಿ ಬಳಕೆ ಅಥವಾ ನಿರ್ವಹಣಾ ವೈಫಲ್ಯದ ಕುರಿತು ಸಾರ್ವಜನಿಕರು ಆಡಿಕೊಳ್ಳುವಂತಾಗಿದ್ದು, ಈ ಹಿನ್ನೆಲೆಯಲ್ಲಿ, ಈಗಾಗಲೇ ಬಿಲ್ ಪಾವತಿಯಾಗಿದ್ದರೆ ಹೊಣೆ ಯಾರು? ತಾಂತ್ರಿಕ ಪರಿಶೀಲನೆ ನಡೆದಿತ್ತೇ? ಹಸ್ತಾಂತರ ಮಾಡಿದೇ ಇಷ್ಟು ವರ್ಷ ವಿಳಂಬ ಯಾಕೆ?” ಎಂಬ ಪ್ರಶ್ನೆಗಳು ಮತ್ತೆ ಕೇಳಿ ಬಂದಿವೆ.
ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ






