ಜೂನ್ 5ಕ್ಕೆ ಮುಂಗಾರು ಎಂಟ್ರಿ: ಭಾರೀ ಮಳೆಯ ನಿರೀಕ್ಷೆ

ಕಾರವಾರ: ರಾಜ್ಯದ ಜನರು, ವಿಶೇಷವಾಗಿ ಕರಾವಳಿ ಭಾಗದ ರೈತರು ಮತ್ತು ಮೀನುಗಾರರು ಕಾತರದಿಂದ ಕಾಯುತ್ತಿದ್ದ ನೈಋತ್ಯ ಮುಂಗಾರು ಜೂನ್ 5ರಂದು ಕರ್ನಾಟಕ ಪ್ರವೇಶಿಸಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಅಧಿಕೃತ ಮುನ್ಸೂಚನೆ ನೀಡಿದೆ.
ಈ ಬಾರಿ ಮುಂಗಾರು ಪ್ರವೇಶ ವಿಳಂಬವಾಗುವ ಸಾಧ್ಯತೆ ಇದೆ ಎಂಬ ಮಾತುಗಳು ಕೇಳಿಬಂದಿದ್ದರೂ, ಇದೀಗ ಹವಾಮಾನ ಇಲಾಖೆ ಆ ಆತಂಕಗಳಿಗೆ ತೆರೆ ಎಳೆದಿದ್ದು, ವಾಡಿಕೆಯ ವೇಳೆಯಲ್ಲಿಯೇ ಮುಂಗಾರು ಕರಾವಳಿ ಕರ್ನಾಟಕವನ್ನು ತಲುಪಲಿದೆ ಎಂದು ಸ್ಪಷ್ಟಪಡಿಸಿದೆ.
ದೇಶದ ಕೃಷಿ ಕ್ಷೇತ್ರದ ಜೀವನಾಡಿಯಾಗಿರುವ ನೈಋತ್ಯ ಮುಂಗಾರು ಈಗಾಗಲೇ ಕೇರಳದ ಹಲವು ಭಾಗಗಳು ಹಾಗೂ ಅರಬ್ಬಿ ಸಮುದ್ರದ ದಕ್ಷಿಣ ಭಾಗದಲ್ಲಿ ಸಕ್ರಿಯಗೊಂಡಿದ್ದು, ಅದರ ಪರಿಣಾಮವಾಗಿ ದಕ್ಷಿಣ ಕನ್ನಡ, ಉಡುಪಿ ಹಾಗೂ ಉತ್ತರ ಕನ್ನಡ ಜಿಲ್ಲೆಗಳಲ್ಲಿ ಮಳೆಯ ಚಟುವಟಿಕೆಗಳು ಮತ್ತಷ್ಟು ಚುರುಕುಗೊಳ್ಳುವ ನಿರೀಕ್ಷೆಯಿದೆ.
ವಶೇಷವಾಗಿ ಉತ್ತರ ಕನ್ನಡ ಜಿಲ್ಲೆಯ ಕರಾವಳಿ ಹಾಗೂ ಗುಡ್ಡಗಾಡು ಪ್ರದೇಶಗಳಲ್ಲಿ ಉತ್ತಮ ಮಳೆಯಾಗುವ ಸಾಧ್ಯತೆ ಇದ್ದು, ರೈತರಲ್ಲಿ ಸಂತಸ ಮನೆ ಮಾಡಿದೆ. ಕೃಷಿ ಚಟುವಟಿಕೆಗಳಿಗೆ ಅಗತ್ಯವಾದ ಮಳೆ ಸಮಯಕ್ಕೆ ಲಭ್ಯವಾಗಲಿರುವುದು ಜಿಲ್ಲೆಯ ಕೃಷಿ ವಲಯಕ್ಕೆ ಆಶಾದಾಯಕ ಬೆಳವಣಿಗೆಯಾಗಿದೆ.
ಇನ್ನೊಂದೆಡೆ ಮುಂಗಾರು ಪ್ರವೇಶದೊಂದಿಗೆ ಕರಾವಳಿ ಭಾಗದಲ್ಲಿ ಬಲವಾದ ಗಾಳಿ ಹಾಗೂ ಸಮುದ್ರ ಅಲೆಗಳ ಅಬ್ಬರ ಹೆಚ್ಚಾಗುವ ಸಾಧ್ಯತೆ ಇರುವುದರಿಂದ ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವಂತೆ ಸಂಬoಧಿತ ಇಲಾಖೆಗಳಿಗೂ ಸೂಚಿಸಲಾಗಿದೆ.
ಮುಂಗಾರು ಆಗಮನದಿಂದ ಉತ್ತರ ಕನ್ನಡ ಸೇರಿದಂತೆ ಕರಾವಳಿ ಕರ್ನಾಟಕದ ಜನರಲ್ಲಿ ಸಂತಸ ಮೂಡಿದ್ದು, ಮುಂದಿನ ಕೆಲ ದಿನಗಳಲ್ಲಿ ವ್ಯಾಪಕ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಬ್ಯೂರೋ ರಿಪೋರ್ಟ್ ವಿಸ್ಮಯ ನ್ಯೂಸ್




