
ಕುಮಟಾ : ಪಟ್ಟಣದಲ್ಲಿ ಸುರಿಯುತ್ತಿರುವ ಭಾರೀ ಮಳೆ ಮತ್ತು ಅವೈಜ್ಞಾನಿಕ ಕಾಮಗಾರಿಯಿಂದಾಗಿ ತಗ್ಗು ಪ್ರದೇಶಗಳು ಜಲಾವೃತಗೊಂಡಿದೆ. ಅದರಲ್ಲೂ ರಾಷ್ಟ್ರೀಯ ಹೆದ್ದಾರಿಯ ಸನ್ಮಾನ್ ಹೋಟೆಲ್ ಮುಂಭಾಗದಿAದ ನೆಲ್ಲಿಕೇರಿ ಕಾಲೇಜಿನತ್ತ ಸಾಗುವ ವಿದ್ಯಾರ್ಥಿಗಳು ಪ್ರತಿದಿನ ಜೀವವನ್ನು ಪಣಕ್ಕಿಟ್ಟು ರಸ್ತೆ ದಾಟುವ ಪರಿಸ್ಥಿತಿ ನಿರ್ಮಾಣವಾಗಿದೆ.
ಕಾಲೇಜಿಗೆ ಹೋಗುವ ರಸ್ತೆಯ ಪಕ್ಕದಲ್ಲೇ ಹರಿಯುವ ಗಟಾರದಲ್ಲಿ ಸೊಂಟದ ಮಟ್ಟದಷ್ಟು ನೀರು ವೇಗವಾಗಿ ಹರಿಯುತ್ತಿದ್ದು, ರಸ್ತೆ ಸಂಪೂರ್ಣ ಅಪಾಯದ ವಲಯವಾಗಿ ಪರಿಣಮಿಸಿದೆ. ಮಳೆಯ ನೀರಿನ ರಭಸಕ್ಕೆ ರಸ್ತೆ ದಾಟುತ್ತಿದ್ದ ವೇಳೆ ಇಬ್ಬರು ವಿದ್ಯಾರ್ಥಿಗಳು ಕಾಲು ಜಾರಿ ನೀರಿನಲ್ಲಿ ಬಿದ್ದ ಘಟನೆ ಆತಂಕ ಮೂಡಿಸಿದೆ. ಅದೃಷ್ಟವಶಾತ್ ಸ್ಥಳದಲ್ಲಿದ್ದ ಸಾರ್ವಜನಿಕರು ತಕ್ಷಣ ನೆರವಿಗೆ ಧಾವಿಸಿದ್ದರಿಂದ ಯಾವುದೇ ದೊಡ್ಡ ಅನಾಹುತ ಸಂಭವಿಸಿಲ್ಲ.
ಪಾಲಕರು ಮತ್ತು ಸಾರ್ವಜನಿಕರಲ್ಲಿ ಆತಂಕ
ಪ್ರತಿದಿನ ನಾಲ್ಕೈದು ವಿದ್ಯಾರ್ಥಿಗಳು ಕೈಕೈ ಹಿಡಿದುಕೊಂಡು ಹರಸಾಹಸಪಟ್ಟು ರಸ್ತೆ ದಾಟುತ್ತಿರುವ ದೃಶ್ಯ ಕಂಡುಬರುತ್ತಿದ್ದು, ಪಾಲಕರು ಮತ್ತು ಸಾರ್ವಜನಿಕರಲ್ಲಿ ಭಾರೀ ಆತಂಕ ಮನೆಮಾಡಿದೆ. ಇದು ಸಂಬoಧಪಟ್ಟ ಅಧಿಕಾರಿಗಳ ನಿರ್ಲಕ್ಷ್ಯವನ್ನು ಎತ್ತಿ ತೋರಿಸುತ್ತಿದ್ದು, ಶಾಲೆ-ಕಾಲೇಜಿಗೆ ತೆರಳುವ ವಿದ್ಯಾರ್ಥಿಗಳ ಸುರಕ್ಷತೆಗೆ ಪಾಲಕರು ಆತಂಕಗೊಳ್ಳುವoತಾಗಿದೆ.
ಅನಾಹುತ ಸಂಭವಿಸುವ ಮುನ್ನವೇ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ ಶಾಶ್ವತ ಪರಿಹಾರ ಕಲ್ಪಿಸಬೇಕಿದೆ. ಕುಮಟಾ-ಹೊನ್ನಾವರ ಕ್ಷೇತ್ರದ ಶಾಸಕ ದಿನಕರ ಶೆಟ್ಟಿಯವರು ಕೂಡ ಈ ಕುರಿತು ತುರ್ತು ಗಮನ ಹರಿಸಿ ಅಧಿಕಾರಿಗಳಿಗೆ ಅಗತ್ಯ ಸೂಚನೆ ನೀಡುವ ಮೂಲಕ ವಿದ್ಯಾರ್ಥಿಗಳ ಸುರಕ್ಷತೆಗೆ ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.
ಬ್ಯೂರೋ ರಿಪೋರ್ಟ್, ವಿಸ್ಮಯ ನ್ಯೂಸ್






