Focus News
Trending

ಹೆಚ್ಚುತ್ತಿದೆಯೇ ಅಕ್ರಮ ಗೋ ಸಾಗಾಟ ಮತ್ತು ಮಾರಾಟ ?. ಕಳ್ಳ ದಂಧೆಕೋರರಿಗೆ ಹಬ್ಬದೂಟ ನೀಡುತ್ತಿರುವ ಜೋರಾದ ಮಳೆ

ಅಂಕೋಲಾ: ಜಿಲ್ಲೆಯ ವಿವಿಧಡೆ ಅಕ್ರಮವಾಗಿ ಗೋವುಗಳನ್ನು ಮತ್ತು ಗೋಮಾಂಸವನ್ನು ವಾಹನಗಳಲ್ಲಿ ತುಂಬಿ ಸಾಗಿಸುವ ನೂರಾರು ಪ್ರಕರಣಗಳು ಆಗಾಗ ವರದಿಯಾಗುತ್ತಲೇ ಇರುತ್ತವೆ. ಈ ನಡುವೆ ಅಂಕೋಲಾ ತಾಲೂಕಿನ ಪಟ್ಟಣ ಹಾಗೂ ಗ್ರಾಮೀಣ ಭಾಗಗಳಲ್ಲಿ ಸ್ಥಳೀಯರ ಸಹಕಾರ ಪಡೆದು ಅಕ್ರಮ ಗೋ ಸಾಗಾಟ ಮತ್ತು ಮಾರಾಟದ ವ್ಯವಸ್ಥಿತ ಜಾಲ ಬೇರೂರುತ್ತಿರುವ ಶಂಕೆ ವ್ಯಕ್ತವಾಗುತ್ತಿದೆ.

ತಾಲೂಕಿನ ಬಹುತೇಕ ಕಡೆ ಕಂಡು ಬರುತ್ತಿದ್ದ ದನಕರುಗಳ ಸಂಖ್ಯೆಯೂ ಇತ್ತೀಚಿನ ದಿನಗಳಲ್ಲಿ ಇಳಿಮುಖವಾಗುತ್ತಿದ್ದು ದನಕರುಗಳು ಗೋವು ಕಳ್ಳರ ಪಾಲಾಗುತ್ತಿರುವ ಸಂಶಯಕ್ಕೆ ಪುಷ್ಟಿ ನೀಡುತ್ತಿವೆ ಎನ್ನುವ ಮಾತು ಸಾರ್ವಜನಿಕ ವಲಯದಿಂದ ಕೇಳಿ ಬರಲಾರಂಭಿಸಿದೆ.

ತಾಲೂಕಿನಲ್ಲಿ ಅನೇಕ ರೈತರು ದನಕರುಗಳನ್ನು ಸಾಕಿಕೊಂಡು ಕೃಷಿ ಮತ್ತು ಹೈನುಗಾರಿಕೆ ಮೂಲಕ ಜೀವನ ಸಾಗಿಸುತ್ತ ಬಂದಿದ್ದಾರೆ. ಅವರು ಪ್ರತಿನಿತ್ಯ ತಮ್ಮ ಕೊಟ್ಟಿಗೆಯಲ್ಲಿ ದನಕರುಗಳನ್ನು ಸಾಕುತ್ತಾರೆ. ಒಂದೊಮ್ಮೆ ಅವುಗಳನ್ನು ಮೇಯಲು ಬಿಟ್ಟರೂ ಸಂಜೆಯಾದೊಡನೆ ಅವು ಕೊಟ್ಟಿಗೆಗೆ ಮರಳುತ್ತವೆ. ಇತ್ತೀಚಿಗೆ ಅವುಗಳಲ್ಲಿಯೂ ಬೆರಳೆಣಿಕೆ ಗೋವುಗಳು ಸಹ ಕಳ್ಳರ ಪಾಲಾಗುತ್ತಿವೆ ಎನ್ನಲಾಗಿದೆ.

ಆದರೆ ಇನ್ನು ಕೆಲವೆಡೆ ನಾನಾ ಕಾರಣಗಳಿಂದ ಬಿಡಾಡಿ ದನ ಕರುಗಳ ಸಂಖ್ಯೆ ಹೆಚ್ಚಿದ್ದು ಪಟ್ಟಣ ಮತ್ತು ಗ್ರಾಮೀಣ ವ್ಯಾಪ್ತಿಯಲ್ಲಿಯೂ ಬೇಕಾ ಬಿಟ್ಟಿಯಾಗಿ ಓಡಾಡುತ್ತಿರುತ್ತವೆ. ರಾತ್ರಿ ಸಮಯದಲ್ಲಿ ಗೋವುಗಳು ಹೆದ್ದಾರಿ ಮತ್ತಿತರ ರಸ್ತೆಯಲ್ಲಿ ಅಡ್ಡಲಾಗಿ ಮಲಗಿ ವಾಹನ ಸಂಚಾರಕ್ಕೂ ಅಡ್ಡಿ ಯಾಗುವಂತಿರುತ್ತದೆ. ಇನ್ನು ಕೆಲವು ತಾವಿರುವ ಸ್ಥಳದಲ್ಲಿಯೇ ಕರು ಹಾಕಿದ ಅನೇಕ ಉದಾಹರಣೆಗಿದ್ದು, ವಾರಸುದಾರರಿಲ್ಲದ ಗೋಮಾತೆಗೆ ಪ್ರಾಣಿದಯೆ ತೋರಿ ಕೆಲವರು ಬೀದಿ ನಾಯಿಗಳಿಂದ ಅಪಾಯ ಆಗದಂತೆ ಕರುವಿಗೆ ರಕ್ಷಣೆ ಸಹ ನೀಡಿದ್ದುಂಟು.

ಮಳೆಗಾಲ ಸಂದರ್ಭದಲ್ಲಿ ಅಂಗಡಿ ಮುಂಭಾಗ, ಶಾಲಾ- ಕಾಲೇಜು ಇತರೆ ಕಛೇರಿಗಳ ಆವರಣ, ವಿವಿಧ ಕಟ್ಟಡ ಹಾಗೂ ಬಯಲು ಪ್ರದೇಶಗಳಲ್ಲ ಇವುಗಳಿಗೆ ಆಶ್ರಯತಾಣವಾಗಿ ಬಿಡುತ್ತದೆ. ಇವುಗಳನ್ನೇ ಹೆಚ್ಚಿನ ಟಾರ್ಗೆಟ್ ಮಾಡುವ ಕಳ್ಳರು,ರಾತ್ರಿ ಸಮಯದಲ್ಲಿ ಬಂದು ಕದ್ದು ಸಾಗಿಸುತ್ತಾರೆ ಎನ್ನಲಾಗಿದೆ.

ಜಿಲ್ಲೆಯ ಕೆಲವೆಡೆ ಹಾಗೂ ಹೊರ ಜಿಲ್ಲೆ ಮಂಗಳೂರು , ಹತ್ತಿರದ ಕೇರಳ ಮತ್ತಿತರ ರಾಜ್ಯ ಹಾಗೂ ನಾನಾ ಭಾಗಗಳಲ್ಲಿ ಗೋಮಾಂಸಕ್ಕೆ ವ್ಯಾಪಕ ಬೇಡಿಕೆ ಇದ್ದು ಗೋವುಗಳ ಕಳ್ಳ ಸಾಗಾಣಿಕೆ – ಮಾರಾಟ ಮಾಡುವ ದಂಧೆಗೆ ಕೆಲವರು ಕೈ ಹಾಕಿದಂತಿದ್ದು ಸ್ಥಳೀಯರು ಅವರಿಗೆ ಸಾಥ್ ನೀಡುತ್ತಾರೆ ಎನ್ನಲಾಗಿದೆ.

ತಾಲೂಕಿನ ಅಡ್ಲೂರು – ಆಗಸೂರು-ಶಿರಗುಂಜಿ ಒಳಮಾರ್ಗವಾಗಿ ಬಂದು ರಾಷ್ಟ್ರೀಯ ಹೆದ್ದಾರಿ ಸೇರುವುದು, ಭಾವಿಕೇರಿ – ಬಡಗೇರಿ, ಕೇಣಿ , ತೆಂಕಣಕೇರಿ, ಪೂಜಗೇರಿ, ಸಿಂಗನಮಕ್ಕಿ, ಹೊಸ್ಕೇರಿ, ಶೆಟಗೇರಿ ಮಾರ್ಗವಾಗಿ ಇಲ್ಲವೇ ಪಟ್ಟಣದ ಮುಖ್ಯರಸ್ತೆ, ರಾ.ಹೆದ್ದಾರಿ ಸೇರಿದಂತೆ ಇತರೆಡೆ ಮಾರ್ಗಗಳನ್ನು ಬಳಸಿ ಗೋ ಕಳ್ಳರು ತಮ್ಮ ಅಡ್ನಾಡಿ ದಂಧೆ ನಡೆಸುತ್ತಿದ್ದಾರೆ ಎನ್ನಲಾಗಿದೆ. ಕೆಲವರು ಮೀನು, ತರಕಾರಿ, ಮತ್ತಿತರ ಸಾಮಾನು ಸಾಗಿಸುವ ವಾಹನಗಳಲ್ಲಿಯೂ ಗೋವು ಮತ್ತು ಗೋಮಾಂಸ ಕಳ್ಳ ಸಾಗಣೆ ಮಾಡುತ್ತಿರುವ ಕುರಿತು ಗುಮಾನಿ ಇದೆ..ಜಿಲ್ಲೆಯ ಹಲವೆಡೆ ಸಿಸಿ ಕ್ಯಾಮೆರಾ ಗಳಲ್ಲಿ ಪತ್ತೆಯಾದಂತೆ, ಇಲ್ಲವೇ ಆರೋಪಿಗಳು ಇತರೆಡೆ ಸಿಕ್ಕಿಬಿದ್ದ ಸ್ಥಳಗಳ ಬಗ್ಗೆ ಪರಿಶೀಲಿಸಿದಾಗ ಕಾರು ಮತ್ತಿತರ ಐಷಾರಾಮಿ ವಾಹನಗಳನ್ನು ಸಹ ಈ ಅಕ್ರಮ ದಂಧೆಗೆ ಬಳಸಲಾಗುತ್ತಿರುವುದು ತಿಳಿದು ಬಂದಿದೆ.

ಪೋಲಿಸ್ ಇಲಾಖೆ ಆಗಾಗ ಇಂತಹ ಜಾಲ ಬೇಧಿಸಿ ಪ್ರಕರಣ ದಾಖಲಿಸಿದರೂ ಸಹ,ಈ ಹಿಂದಿನ ಪ್ರಕರಣಗಳಲ್ಲಿ ಶಾಮಿಲಾಗಿರುವ ಕೆಲವರು, ಮತ್ತು ಈವರೆಗೂ ಪ್ರಕರಣದಲ್ಲಿ ಸಿಲುಕಿಕೊಳ್ಳದ ಇನ್ನು ಕೆಲವರು ಈಗಲೂ ಅವ್ಯಾಹತವಾಗಿ ತಮ್ಮ ಅಕ್ರಮ ದಂಧೆ ಮುಂದುವರಿಸುತ್ತಿದ್ದಾರೆ ಎನ್ನಲಾಗಿದೆ.ಒಮ್ಮೊಮ್ಮೆ ಸಿಕ್ಕು ಬಿದ್ದಾಗ, ಮತ್ತೆ ಕೆಲವೊಮ್ಮೆ ಸಿಕ್ಕಿ ಬೀಳುವ ಹೆದರಿಕೆಯಿಂದ ಸಂಬಂಧಿಸಿದ ಕೆಲ ಅ ಅಧಿಕಾರಿ – ಸಿಬ್ಬಂದಿಗಳು ಮತ್ತಿತರರಿಗೂ ಕೈ ಬಿಸಿ ಮಾಡಿ ಇಲ್ಲವೇ ಮಾಮೂಲಿ ನೀಡಿ ಕಾನೂನಿನ ಕುಣಿಕೆಯಿಂದ ತಪ್ಪಿಸಿಕೊಂಡು ತಮ್ಮ ಕರಾಮತ್ತು ತೋರಿಸುತ್ತಾರೆ ಎನ್ನಲಾಗಿದೆ.ಇದೀಗ ಮಳೆಗಾಲ ಆರಂಭವಾಗಿದ್ದು ಜೋರಾಗಿ ಅಬ್ಬರಿಸುತ್ತಿದ್ದು, ಊರಿನಲ್ಲಿಯೇ ಆಗಲಿ ಹೊರಗಡೆಯೇ ಆಗಲಿ ಗೋರಕ್ಷಕ ಸಾರ್ವಜನಿಕರು,ಸಂಬಂಧಿತ ಇಲಾಖೆಗಳು ಅಕ್ರಮ ದಂಧೆ ಕೋರರ ಮೇಲೆ ನಿಗಾ ಇಡಲು ಇಲ್ಲವೇ ವಾಹನ ತಪಾಸಣೆ ಮಾಡಲು ಕಷ್ಟ ಸಾಧ್ಯವಾಗುತ್ತಿರುವುದು, ಗೋ ಕಳ್ಳರ ಪಾಲಿಗೆ ಹಬ್ಬದೂಟದಂತಾಗಿದೆ.

ಕೆಲವು ಕಡೆ ಚಿಕ್ಕ ಕರುಗಳೂ ಸಹ ಕಟುಕರ ಪಾಲಾಗುತ್ತಿರುವದು, ಮತ್ತು ಹಣದ ಆಸೆಗೆ ಕಳ್ಳ ಜಾಲದಲ್ಲಿ ಸ್ಥಳೀಯರೂ ಭಾಗಿಯಾಗುತ್ತಿದ್ದಾರೆ ಎನ್ನಲಾಗಿದ್ದು ಇದು ಆತಂಕಕಾರಿ ಬೆಳವಣಿಗೆ ಆಗಿದೆಗೋವುಗಳನ್ನು ನೇರವಾಗಿ ಸಾಗಿಸಲು ಸಾಧ್ಯವಾಗದಾದಾಗ ಇಲ್ಲವೇ ಇತರೇ ಕಾರಣಗಳಿಂದ ಬೋಳೆ – ಜಮಗೋಡ, ತಳಗದ್ದೆ, ಬೆಳಸೆ ಮತ್ತಿತರ ವ್ಯಾಪ್ತಿಯ ನಿರ್ಜನ ಪ್ರದೇಶಗಳಲ್ಲಿ ಗೋವುಗಳನ್ನು ಕಡಿದು ಮಾಂಸ ಮಾಡಿ ಸಾಗಿಸಲಾಗುತ್ತಿದೆ ಎನ್ನಲಾಗಿದ್ದು, ಅಳಿದುಳಿದ ಎಲುವು, ತಲೆಬುರುಡೆ, ಚರ್ಮಗಳನ್ನು ರೈಲ್ವೆ ಹಳಿ ಇಲ್ಲವೇ ಇತರೆಡೆ ಎಸೆದು ಸ್ಥಳೀಯರ ದಿಕ್ಕು ತಪ್ಪಿಸುವ ಹುನ್ನಾರದ ಯತ್ನ ನಡೆಸಲಾಗುತ್ತಿರುವ ಕುರಿತು ಅಲ್ಲಲ್ಲಿ ಕೇಳಿಬಂದಂತಿದೆ.

ಪೊಲೀಸ್ ಹಾಗೂ ಸಂಬಂಧಿತ ಇಲಾಖೆಗಳು ಈಗಲಾದರೂ ಎಚ್ಚೆತ್ತು ಅಕ್ರಮ ದಂಧೆ ಕೋರರನ್ನು ಹೆಡೆಮುರಿ ಕಟ್ಟಿ, ಗೋ ರಕ್ಷಣೆಗೆ ಮುಂದಾಗಬೇಕೆನ್ನುವುದು ಗೋ ಪ್ರೇಮಿಗಳ ಹಾಗೂ ಸಾರ್ವಜನಿಕರ ಆಗ್ರಹವಾಗಿದೆ.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Back to top button