ಮಾಹಿತಿ
Trending

ರಸ್ತೆಯಂಚಿನ ತಗ್ಗಿನ ಹೊಂಡದಲ್ಲಿ ಪಲ್ಟಿಯಾದ ಕಾರ್:ಓರ್ವ ಸಾವು

  • ಗೋಕರ್ಣದಲ್ಲಿ ಕಾರ್ ಅಪಘಾತ : ಸ್ಥಳದಲ್ಲಿಯೇ ಮೃತನಾದ ಅಂಕೋಲಾದ ಯುವಕ
  • ಕುಟುಂಬಸ್ಥರಿಗೆ ದೊರೆಯದ ಅಂತಿಮ ದರ್ಶನ : ವಿಧಿಯಾಟ ಬಲ್ಲವರಾರು?

ಅಂಕೋಲಾ : ಗೋಕರ್ಣದಲ್ಲಿ ಬುಧವಾರ ತಡರಾತ್ರಿ ನಡೆದ ಕಾರ್ ಅಪಘಾತದಲ್ಲಿ ಚಾಲಕ ಸ್ಥಳದಲ್ಲಿಯೇ ಸಾವನಪ್ಪಿದ್ದಾನೆ. ಉಳಿದ ಮೂವರ ಪೈಕಿ ಇಬ್ಬರಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು, ಓರ್ವನಿಗೆ ಕೈ ಮೂಳೆ ಮೂರಿತವಾಗಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಘಟನೆ : ಮೂಲತಃ ಅಗ್ರಗೋಣ ಗ್ರಾಮದವನಾದ ಹಾಲಿ ಅಂಕೋಲಾ ಪುರಸಭೆ ವ್ಯಾಪ್ತಿಯ ಲಕ್ಷ್ಮೇಶ್ವರದ ನಿವಾಸಿಯಾಗಿರುವ ಗೌರವ ದೇವರಾಜ ಗೋಳಿಕಟ್ಟೆ (25) ಎಂಬಾತನೇ ಮೃತಪಟ್ಟ ದುರ್ದೈವಿ. ಈತನು ತನ್ನ ಗೆಳೆಯರೊಂದಿಗೆ ಅಗ್ರಗೋಣ ಕಡೆಯಿಂದ ಅಂಕೋಲಾಕ್ಕೆ ಬರಲು ಗೋಕರ್ಣದ ಚೌಡಗೇರಿ ರಸ್ತೆ ಮೂಲಕ ಕಾರ್‍ನಲ್ಲಿ ಬರುತ್ತಿರುವ ವೇಳೆ ಈ ಅವಘಡ ನಡೆದಿದೆ.

ಚಾಲಕನ ನಿಯಂತ್ರಣ ತಪ್ಪಿದ ಕಾರ್ ಎಡಬದಿಯ ತಗ್ಗಿನ ಹೊಂಡದಲ್ಲಿ ಪಲ್ಟಿಯಾದ ಕಾರಣ ಚಾಲಕ ಗೌರವ ಗೋಳಿಕಟ್ಟೆ ಸ್ಥಳದಲ್ಲಿಯೇ ಮೃತಪಟ್ಟಿದ್ದು, ಆತನ ಮೃತ ದೇಹವನ್ನು ಕಾರ್ ಸಮೇತ ಕ್ರೇನ್ ಮೂಲಕ ಹೊರತೆಗೆಯಲಾಗಿದೆ. ಕಾರ್‍ನಲ್ಲಿ ಪ್ರಯಾಣಿಸುತ್ತಿದ್ದ ರಜತ್ ನಾಯಕ ಮತ್ತು ವರುಣ ನಾಯಕ ಇವರೀರ್ವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಹನೀಶ್ ನಾಯಕ ಎಂಬಾತನಿಗೆ ಕೈ ಮೂಳೆ ಮುರಿತವಾಗಿ ಹೆಚ್ಚಿನ ಚಿಕಿತ್ಸೆ ಕಾರವಾರದ ಸಿವಿಲ್ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ.

ನಿಯಂತ್ರಣ ಕಳೆದುಕೊಂಡ ಕಾರ್‍ನ ರಭಸಕ್ಕೆ ರಸ್ತೆಯಂಚಿನ ಗಿಡ ಮರಗಳ ಕೊಂಬೆಗಳು ಮುರಿದ್ದಿದ್ದು, ಕಾರ್ ಪಲ್ಟಿಯಾಗಿ ಅನತಿ ದೂರದಲ್ಲಿಯೇ ಇದ್ದ ರಸ್ತೆಯ ಎಡಬದಿಯ ತಗ್ಗಿನ ಹೊಂಡದಲ್ಲಿ ಬಿತ್ತು ಎಂದು ಹೇಳಲಾಗಿದ್ದು, ಕಾರ್ ಚಾಲಕ ಗೌರವ್ ನಾಯಕ ಸ್ಥಳದಲ್ಲಿಯೇ ಮೃತಪಟ್ಟಿದ್ದು, ಆತನ ಜೊತೆಗಿದ್ದ ಗೆಳೆಯರು ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಗೋಕರ್ಣ ಪಿಎಸ್‍ಐ ನವೀನ ನಾಯ್ಕ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ. ಎ.ಎಸ್.ಐ ಸುಭಾಶ್ ನಾಯ್ಕ, ಪೊಲೀಸ್ ಸಿಬ್ಬಂದಿಗಳಾದ ಜಿ.ಬಿ.ರಾಣೆ, ನಾಗರಾಜ, ನವೀನ, ಜಾಧವ, ನಿಲೇಶ ಮತ್ತು ಅಗ್ನಿಶಾಮಕದಳದ ಸಿಬ್ಬಂದಿಗಳು ಕರ್ತವ್ಯ ನಿರ್ವಹಿಸಿದರು.

ಶವ ಸಾಗಿಸಲು ತಲಗೇರಿಯ ಗಣೇಶ ನಾಯಕ ಸಹಕರಿಸಿದರು. ಗೋಕರ್ಣ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಡಾ.ಜಗದೀಶ ಮರಣೋತ್ತರ ಪರೀಕ್ಷೆ ನಡೆಸಿದರು. ಅಗ್ರಗೋಣ ಗ್ರಾಮದಲ್ಲಿ ಅಂತ್ಯ ಸಂಸ್ಕಾರ ನಡೆಸಲಾಗಿದ್ದು, ಕುಟುಂಬಸ್ಥರು, ಊರ ನಾಗರಿಕರು, ಮತ್ತಿತರರು ಸಹಕರಿಸಿದರು.

ಗೌರವಯುತ ಕುಟುಂಬದಲ್ಲಿ ಜನಿಸಿದ್ದ, ಗೌರವ ಗೋಳಿಕಟ್ಟೆ ತನ್ನ ವಿದ್ಯಾಭ್ಯಾಸ ಮುಗಿಸಿ, ಬೆಂಗಳೂರಿನಲ್ಲಿ ಖಾಸಗಿ ಉದ್ಯೋಗದಲ್ಲಿದ್ದ. ಇತ್ತೀಚೆಗಷ್ಟೇ ಊರಿಗೆ ಬಂದು ಸ್ವ-ಉದ್ಯೋಗ ಮಾಡಿಕೊಂಡಿದ್ದ. ಮೃತನ ತಂದೆ-ತಾಯಿಗಳು ಪ್ರೌಢ ಶಾಲೆಯ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಕುಟುಂಬದವರ ದುರದೃಷ್ಟವೋ ಎನ್ನುವಂತೆ ಕೋವಿಡ್ ಮತ್ತಿತರ ನಾನಾ ಕಾರಣಗಳಿಂದ ತಂದೆ-ತಾಯಿ ಮತ್ತು ಸಹೋದರಿಗೆ, ಮೃತನ ಅಂತಿಮ ದರ್ಶನವೂ ದೊರೆಯದಿರುವುದು ವಿಧಿಯಾಟವೇ ಸರಿ. ಒಟ್ಟಿನಲ್ಲಿ ಮೃತ ಗೌರವ ನಾಯಕನ ದೊಡ್ಡ ಕುಟುಂಬದಲ್ಲಿ ಶೋಕದ ಕರಾಳ ಛಾಯೆ ಆವರಿಸಿದಂತಿದೆ.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Back to top button