Follow Us On

WhatsApp Group
ಮಾಹಿತಿ
Trending

ದೂರದ ದುಬೈನಲ್ಲಿ ನಡೆದ ಅದ್ದೂರಿ ಕನ್ನಡೋತ್ಸವ


ಕನ್ನಡ ಮಿತ್ರರು , ಯುಎಇ ಸಂಘಟನೆಯವರು ದುಬೈನಲ್ಲಿ ನಡೆಸುತ್ತಿರುವ ವಿಶ್ವದಲ್ಲೇ ಅತ್ಯಂತ ದೊಡ್ಡ ಕನ್ನಡ ಕಲಿಕಾ ಕೇಂದ್ರ ಎಂಬ ಹೆಗ್ಗಳಿಕೆಗೆ ಪಾತ್ರವಾದ ” ಕನ್ನಡ ಪಾಠಶಾಲೆ , ದುಬೈ “ನ 7ನೇ ಶೈಕ್ಷಣಿಕ ವರ್ಷಕ್ಕೆ ಆನ್ಲೈನ್ ಮೂಲಕವೇ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರಾದ ಚಂದ್ರಶೇಖರ್ ಕಂಬಾರರಿಂದ ಚಾಲನೆ ದೊರೆಯಿತು.

 
ಕರೋನ ಹಿನ್ನೆಲೆಯಲ್ಲಿ ಈ ಬಾರಿ ಕನ್ನಡ ಪಾಠಶಾಲೆಯ  ಆರಂಭೋತ್ಸವ ಸುಗ್ಗಿ-07ನ್ನು ಆನ್ಲೈನ್ ಮೂಲಕವೇ ಹಮ್ಮಿಕೊಳ್ಳಲಾಗಿತ್ತು . ಕಾರ್ಯಕ್ರಮಕ್ಕೆ ಆನ್ಲೈನ್ ಮೂಲಕ  ಚಾಲನೆ ನೀಡಿ , ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದ ಮುಖ್ಯ ಅತಿಥಿಗಳಾದ  ಡಾ. ಚಂದ್ರಶೇಖರ್ ಕಂಬಾರರು ಅರಬ್ಬರ ನಾಡಲ್ಲಿ ಕನ್ನಡ ಕಲಿಸುವ ಕನ್ನಡ ಮಿತ್ರರ ಕಾರ್ಯವನ್ನು ಶ್ಲಾಘಿಸಿದರು. ಕಾರ್ಯಕ್ರಮದ  ಅತಿಥಿಗಳಾಗಿ ಪಾಲ್ಗೊಂಡಿದ್ದ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ  ಡಾ. ಟಿ.ಎಸ್. ನಾಗಾಭರಣರವರು ಎಲ್ಲರನ್ನು ಉದ್ದೇಶಿಸಿ ಮಾತನಾಡುತ್ತ , ನಾಡಿಗಷ್ಟೇ ಗಡಿ , ನುಡಿಗೆ ಯಾವುದೇ ಗಡಿಯಿಲ್ಲವೆಂಬುದು ನಿಮ್ಮಿಂದ ಸತ್ಯವಾಗಿದೆ ಎಂದು ಶಾಲಾ ಶಿಕ್ಷಕರನ್ನು  ಅಭಿನಂದಿಸಿದರು .


ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿಗಳಾದ  ಡಾ. ಮುರಳೀಧರ ಅವರು  ಮಾತನಾಡುತ್ತ ,  ಪ್ರಾಧಿಕಾರವು ವಿದೇಶದಲ್ಲಿ ಕನ್ನಡ ಕಲಿಕೆಗೆ 8 ಸಂಪುಟಗಳನ್ನು ಸಿದ್ಧಪಡಿಸಿದ್ದು , ತಾಯ್ನಾಡಿನ ಮಕ್ಕಳಿಗೆ ನಲಿ ಕನ್ನಡ ಮತ್ತು ಕಲಿ ಕನ್ನಡ ಎಂಬ ಸಂಪುಟಗಳು ಪ್ರಾಧಿಕಾರದ ಅಧಿಕೃತ  ವೆಬ್ಸೈಟ್ ನಲ್ಲಿ ಉಚಿತವಾಗಿ ಲಭ್ಯವಿದ್ದು ಎಲ್ಲರೂ ಇದರ  ಲಾಭ ಪಡೆಯಬೇಕೆಂದು ಕರೆ ನೀಡಿದರು ..

ಪ್ರಖ್ಯಾತ ವಾಗ್ಮಿಗಳಾದ ಡಾ. ಕೃಷ್ಣೇಗೌಡ ಅವರು ಮಾತನಾಡಿ , ಬೌಗೋಳಿಕ ಅವಶ್ಯಕತೆಗೆ ಅನುಗುಣವಾಗಿ ರಚನಾತ್ಮಕ ಬೋಧನೆಗೆ ಬದಲಾಗುವುದು , ಇಂದಿನ ಕಲಿಕಾ ಗುಣಮಟ್ಟಕ್ಕೆ ಅತ್ಯಂತ ಅವಶ್ಯ ಎಂದರು .
ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕ ನುಡಿಗಳನ್ನಾಡಿದ ,  ಕನ್ನಡ ಮಿತ್ರರು ಯುಎಇ ಸಂಘಟನೆಯ ಅಧ್ಯಕ್ಷರಾದ ಶ್ರೀ . ಶಶಿಧರ್ ನಾಗರಾಜಪ್ಪನವರು , ಈ ಉಚಿತ ಶಾಲೆಯ ಜೀವಾಳವಾದ  ಶಿಕ್ಷಕಿಯರ ಪರಿಚಯದ ಜೊತೆಗೆ ಕನ್ನಡ  ಕಲಿಸಲು ಸಾಧ್ಯವಾದದ್ದು  ಸಂಘಟನೆಯ ಎಲ್ಲ ಮಿತ್ರರ ಛಲವೇ ಹೊರತು ದುಡ್ಡು ಅಲ್ಲ ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು. 


ಕಳೆದ 6 ವರ್ಷಗಳಿಂದ ಶಾಲೆ ನಡೆದು ಬಂದ ಹಾದಿಯನ್ನು ಶ್ರೀ. ಯುವರಾಜ್ ಮಲ್ಲೇಶ್ ನಿರೂಪಿಸಿದರು . ಕಳೆದ ವರ್ಷ ಉತ್ತೀರ್ಣಗೊಂಡ ವಿದ್ಯಾರ್ಥಿಗಳ ವಿವರಣೆ ನೀಡಿದವರು ಸಂಘಟನೆಯ ಉಪಾಧ್ಯಕ್ಷರಾದ ಶ್ರೀ. ಸಿದ್ದಲಿಂಗೇಶ್ . ಲಾಕ್ ಡೌನ್ ಸಂದರ್ಭದಲ್ಲಿ ಕನ್ನಡ ಮಿತ್ರರು ಕನ್ನಡಿಗರರಿಗೆ ನೆರವಾಗಲು ಮಾಡಿದ ಕಾರ್ಯಗಳನ್ನು , ಸಂಘಟನೆಯ ಕಾರ್ಯದರ್ಶಿಗಳಾದ ಸುನಿಲ್  ಗವಾಸ್ಕರ್ ಅವರು ವಿಡಿಯೋ ಮೂಲಕ ಪ್ರಸ್ತುತ ಪಡಿಸಿದರು .


ಕಾರ್ಯಕ್ರಮದಲ್ಲಿ ಈ ಕನ್ನಡ ಶಾಲೆಯ ಮಹಾ ಪೋಷಕರಾದ ,  ಶ್ರೀಯುತ. ಪ್ರವೀಣ್ ಕುಮಾರ್ ಶೆಟ್ಟಿ  , ಅಧ್ಯಕ್ಷರು , ಕರ್ನಾಟಕ ಅನಿವಾಸಿ ಭಾರತೀಯ ಸಮಿತಿ  ಸಂಘಟನೆ ಹಾಗೂ ಮತ್ತೋರ್ವ ಮಹಾ ಪೋಷಕರಾದ  ಶ್ರೀಯುತ ಮೋಹನ್ ನರಸಿಂಹ ಮೂರ್ತಿ ಉಪಾಧ್ಯಕ್ಷರು , ಕರ್ನಾಟಕ ಅನಿವಾಸಿ ಭಾರತೀಯ ಸಮಿತಿ ಮತ್ತು ಪ್ರೋತ್ಸಾಹಕರಾದ ಜೆ.ಎಸ್.ಎಸ್. ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರಾದ  ಡಾ. ಶಿವಕುಮಾರ್ ಪಾಲ್ಗೊಂಡು ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದರು.


 ಭಾರತೀಯ ಸೇನೆಯಲ್ಲಿ ಕಾರ್ಯನಿರ್ವಹಿಸಿ , ಈಗ ಹುಟ್ಟೂರಿನಲ್ಲಿ ವೈದ್ಯರಾಗಿ ಸೇವೆ ಸಲ್ಲಿಸುತ್ತಿರುವ , ಸ್ವತಃ ಬರಹಗಾರರು ಆದ ಶ್ರೀ ಡಾ. ಮೇಜರ್ ಕುಶವಂತ್ ಕೋಳಿಬೈಲುರವರು ಆನ್ಲೈನ್ ಮೂಲಕ ಶಾಲೆಗೆ ಶುಭ ಕೋರಿದ್ದು ವಿಶೇಷವಾಗಿತ್ತು . ಯುಎಇ ಯಲ್ಲಿರುವ ಎಲ್ಲ ಕನ್ನಡ ಸಂಘಟನೆಯ ಪ್ರಮುಖರು , ಪದಾಧಿಕಾರಿಗಳು ಆನ್ಲೈನ್ ಮೂಲಕವೇ ಸಮಾರಂಭದಲ್ಲಿ  ಪಾಲ್ಗೊಂಡು ಕನ್ನಡ ಶಾಲೆಗೆ ಶುಭ ಹಾರೈಸಿದರು.
 ಆನ್ಲೈನ್ ಕಾರ್ಯಕ್ರಮವಾದರು ಸಹ ಪೋಷಕರು ಸೇರಿದಂತೆ ಅನೇಕ ವಿದ್ಯಾರ್ಥಿಗಳು ಪ್ರಸ್ತುತ ಪಡಿಸಿದ ಸಾಂಸ್ಕೃತಿಕ ಕಾರ್ಯಕ್ರಮಗಳು  ನೋಡುಗರ ಮೆಚ್ಚುಗೆಗೆ ಪಾತ್ರವಾದವು.

ಸಂಪೂರ್ಣ ಕಾರ್ಯಕ್ರಮದ ನಿರೂಪಣೆಯನ್ನು ಶ್ರೀಮತಿ ಕಾವ್ಯ ಯುವರಾಜ್ ನಡೆಸಿಕೊಟ್ಟರು . 
ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಎಲ್ಲರನ್ನು ಕನ್ನಡ ಮಿತ್ರರು ಸಂಘಟನೆಯ ಖಜಾಂಚಿ ಶ್ರೀ. ನಾಗರಾಜ್ ರಾವ್ ಸ್ವಾಗತಿಸಿದರೆ , ಸಂಘಟನೆಯ ಮಾಧ್ಯಮ ಸಂಚಾಲಕರಾದ ಬಾನುಕುಮಾರ್.ಎ. ಎನ್ ಅವರು ಎಲ್ಲರಿಗೂ ವಂದಿಸಿದರು .


ಕರೋನ ಹಿನ್ನೆಲೆಯಲ್ಲಿ ಆನ್ಲೈನ್ ಅಲ್ಲಿ ನಡೆದ ಈ ಕಾರ್ಯಕ್ರಮವನ್ನು ಸಾಮಾಜಿಕ ಜಾಲತಾಣಗಳಲ್ಲಿ ನೇರ ಪ್ರಸಾರ ಮಾಡುವ ಮೂಲಕ ಪ್ರಪಂಚದ ಎಲ್ಲ ಭಾಗಗಳಿಂದ ಸಾವಿರಾರು ಕನ್ನಡ ಪ್ರಿಯರು ಕಾರ್ಯಕ್ರಮ ವೀಕ್ಷಿಸಲು ಅನುವು ಮಾಡಿಕೊಡಲಾಗಿತ್ತು.


ಬ್ಯೂರೋ ರಿಪೋರ್ಟ್ ವಿಸ್ಮಯ ನ್ಯೂಸ್

Back to top button