Focus News
Trending

ಐತಿಹಾಸಿಕ ಪರಂಪರೆ ಉಳಿಸಿ ಅಭಿಯಾನ: ರಣಗಂಬ ಶಾಸನದ ಪರಿಚಯ ಮತ್ತು ಮಾಹಿತಿ : ಫಲಕ ಅಳವಡಿಕೆ ಕಾರ್ಯಕ್ರಮ

ಅಂಕೋಲಾ: ಕರ್ನಾಟಕ ಇತಿಹಾಸ ಅಕಾಡೆಮಿ ಬೆಂಗಳೂರು,ದಿನಕರ ವೇದಿಕೆ ಉತ್ತರಕನ್ನಡ ಅಂಕೋಲಾ ಇವರ ಸಂಯುಕ್ತ ಆಶ್ರಯದಲ್ಲಿ,ಐತಿಹಾಸಿಕ ಪರಂಪರೆ ಉಳಿಸಿ ಅಭಿಯಾನದ ಭಾಗವಾಗಿ,ಬಡಗೇರಿಯ ರಣಗಂಬ ಶಾಸನದ ಪರಿಚಯ ಮತ್ತು ಮಾಹಿತಿ ಫಲಕ ಅಳವಡಿಕೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಶಾಸನಗಳನ್ನು ರಕ್ಷಿಸುವ ಕೆಲಸ ಸರಕಾರದ್ದು ಎಂದು ಭಾವಿಸದೆ ಪ್ರತಿಯೊಬ್ಬರ ಜವಾಬ್ದಾರಿ ಎಂದು ತಿಳಿದು ಸ್ಥಳೀಯರೂ ಅದನ್ನು ರಕ್ಷಿಸಬೇಕು ಎಂದು ಹಿರಿಯ ಸಂಸ್ಕ್ರತಿ ಚಿಂತಕ ನಂದನ ಐಗಳ ಹೇಳಿದರು. ಅವರು ಅಂಕೋಲಾ ತಾಲೂಕಿನ ಬಡಗೇರಿಯ ಬೇಟೆಬೀರ ದೇವಸ್ಥಾನದ ಬಳಿಯಿರುವ ರಣಗಂಬ ಶಾಸನದ ಮಾಹಿತಿ ಫಲಕವನ್ನು ಉದ್ಘಾಟಿಸಿ ಮಾತನಾಡಿ, ಶಾಸನಗಳು ಸ್ಥಳೀಯವಾಗಿ ಐತಿಹಾಸಿಕ ಮಹತ್ವವನ್ನು ಎತ್ತಿ ತೋರಿಸುತ್ತವೆ.

ಹಂಪಿಯಲ್ಲಿರುವ ವಿಜಯನಗರ ಸಾಮ್ರಾಜ್ಯದ ಬಗ್ಗೆ ಬರೆಯಲಾಗಿರುವ ಶಾಸನಗಳಲ್ಲಿ ಅಂಕೋಲಾದ ಭಾವಿಕೇರಿಯಲ್ಲಿರುವ ಶಾಸನವನ್ನು ಉಲ್ಲೇಖಿಸಿರುವದು ಅಂಕೋಲೆಯ ಐತಿಹಾಸಿಕ ಮಹತ್ವವನ್ನು ಸಾರಿ ಹೇಳುತ್ತವೆ. ಇತ್ತೀಚೆಗೆ ಅಂಕೋಲೆಯ ಸುತ್ತಮುತ್ತ ಅನೇಕ ಶಾಸನಗಳು ಸಿಕ್ಕಿವೆ ಅವುಗಳನ್ನು ಓದಿ ಅರ್ಥೈಸಬಲ್ಲ ಇತಿಹಾಸ ಸಂಶೋಧಕ ಶ್ಯಾಮಸುಂದರ ಗೌಡ ಅಂಕೋಲೆಯಲ್ಲಿರುವದು ನಮ್ಮ ಭಾಗ್ಯ ಎಂದರು. ದಿನಕರ ವೇದಿಕೆಯ ಅಧ್ಯಕ್ಷ ರವೀಂದ್ರ ಕೇಣಿ ಮಾತನಾಡಿ ಆಧುನಿಕ ಯುಗದಲ್ಲಿನ ವಾಸ್ತವಿಕತೆಯನ್ನು ಬದಲಾಯಿಸಬಹುದು ಆದರೆ ಇತಿಹಾಸವನ್ನು ಬದಲಾಯಿಸಿ ಬರೆಯಲು ಸಾಧ್ಯವಿಲ್ಲ. ಇತಿಹಾಸ ನಮ್ಮ ಸಂಸ್ಕ್ರತಿಯ ಅಡಿಪಾಯ. ಕೆಲವರು ಇತಿಹಾಸವನ್ನು ತಿರುಚಿ ತಮಗೆ ಬೇಕಾದ ಹಾಗೆ ಬರೆಯುತ್ತಿರುವದು ವಿಷಾದನೀಯವಾಗಿದೆ.

ಗ್ರಾ.ಪಂಚಾಯತ ಸಹಯೋಗದಲ್ಲಿ ಬಡಗೇರಿಯ ಊರ ಜನರೇ ಸೇರಿ ಸ್ವಂತ ಶ್ರಮದ ಮೂಲಕ ಕಟ್ಟೆಯನ್ನು ಕಟ್ಟಿ ಕಂಪೌoಡ ನಿರ್ಮಿಸಿ ಈ ಶಾಸನ ಸ್ಮಾರಕವನ್ನು ರಕ್ಷಿಸಬಹುದು ಎಂದರು. ಭಾವಿಕೇರಿ ಗ್ರಾ.ಪಂ.ಅಧ್ಯಕ್ಷ ಪಾಂಡು ಗೌಡ ಮಾತನಾಡಿ ರಣಗಂಬವನ್ನು ಸುರಕ್ಷಿತವಾಗಿ ರಕ್ಷಿಸಲು ಗ್ರಾ.ಪಂ. ಪೂರ್ಣ ಸಹಕಾರ ನೀಡುವದಾಗಿ ಹೇಳಿದರು. ಊರ ಗೌಡರಾದ ಗೋಪಾಲ ಗೌಡ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಅನುಪಮಾ ಗೌಡ ಪ್ರಾರ್ಥಿಸಿದರು, ಆದ್ಯಾ ಎಸ್ ಗೌಡ ಅಥಿತಿಗಳನ್ನು ಗೌರವಿಸಿದರು. ದಿನಕರ ವೇದಿಕೆಯ ಕಾರ್ಯದರ್ಶಿ . ಸಂದೇಶ ಉಳ್ಳಿಕಾಶಿ ಪ್ರಾಸ್ತವಿಕವಾಗಿ ಮಾತಾಡಿದರು.

ಇತ್ತೀಚಿನ ದಿನಗಳಲ್ಲಿ ಅಂಕೋಲಾ ಹಾಗೂ ಸುತ್ತಮುತ್ತಲ ಪ್ರದೇಶಗಳಲ್ಲಿರುವ ಶಿಲಾಶಾಸನಗಳು, ತಾಮ್ರಪಟ,ವೀರಗಲ್ಲುಗಳು,ಪುರಾತನ ದೇಗುಲಗಳು ಕುರಿತು ವಿಶೇಷ ಅಧ್ಯಯನ ಮಾಡಿ,ಐತಿಹಾಸಿಕ ಮತ್ತು ಪಾರಂಪರಿಕ ಮಹತ್ವ ಸಾರಿ ಹೇಳುತ್ತಿರುವ ಅಂಕೋಲಾ ತಾಲೂಕಿನ ಲಕ್ಷ್ಮೇಶ್ವರ ಗ್ರಾಮದ ಶ್ಯಾಮಸುಂದರ ಗೌಡ ಕಾರ್ಯಕ್ರಮಕ್ಕೆ ಆಗಮಿಸಿದ ಸರ್ವರನ್ನು ಸ್ವಾಗತಿಸಿ ಮಾತನಾಡಿ, ರಣಗಂಬದ ಮೇಲೆ ಕೆತ್ತಲಾದ ಶಾಸನದ ಲಿಪಿ ಸಾರಾಂಶವನ್ನು ಎಳೆ ಎಳೆಯಾಗಿ ಬಿಡಿಸಿ ಹೇಳಿ ಶಾಸನದ ಇತಿಹಾಸದ ತಿಳಿಸಿದರು.

ಸಂಘಟನೆಯ ಪ್ರಮುಖ ಸಂತೋಷ ನಾಯಕ ವಂದಿಸಿದರು. ನಂದನ ಐಗಳರವರನ್ನು ದಿನಕರ ವೇದಿಕೆ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು. ಶ್ರೀಮತಿ ಶೀಲಾ ಬಂಟ, ಡಾ. ಅರ್ಚನಾ ನಾಯಕ, ಎಮ್ ಎಚ್ ಗೌಡ , ಸಾತು ಗೌಡ, ಗೋಪಾಲ ಕೃಷ್ಲ ನಾಯಕ ಸೇರಿದಂತೆ ಇತರೆ ಪ್ರಮುಖರು,ಊರ ನಾಗರಿಕರು ಉಪಸ್ಥಿತರಿದ್ದರು.ಪದ್ಮಶ್ರೀ ಪುರಸ್ಕೃತೆ ,ಜಾನಪದ ಕೋಗಿಲೆ ಸುಕ್ರಿ ಬೊಮ್ಮಗೌಡ ಅವರು ಇದೇ ಬಡಗೇರಿ ಊರಿನವರು ಎನ್ನುವುದು ಸ್ಮರಣೀಯ.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Back to top button