Follow Us On

WhatsApp Group
Important
Trending

ಅಕ್ರಮ ಸರಾಯಿ ಸಾಗಾಟ ಮಾಡುತ್ತಿದ್ದ ಆರೋಪಿಯಿಂದ ಲಂಚಸ್ವೀಕಾರ ಆರೋಪ: ಮಹಿಳಾ ಅಧಿಕಾರಿ ವಶಕ್ಕೆ ಪಡೆದ ಎಸಿಬಿ: ಆರೋಪಿ ಜೊತೆ ಕಳ್ಳ ಡೀಲ್ ಕುದುರಿಸಲು ಹೋಗಿ ಸಿಕ್ಕಿಬಿದ್ದ ಮಹಿಳಾ ಅಧಿಕಾರಿ?

ಅಂಕೋಲಾ: ಅಕ್ರಮ ಸರಾಯಿ ಸಾಗಾಟಕ್ಕೆ ಸಂಬಂಧಿಸಿದ ಪ್ರಕರಣವೊಂದರ ಆರೋಪಿಯೊಬ್ಬರಿಂದ ಲಂಚ ಸ್ವೀಕರಿಸುತ್ತಿದ್ದ ಆರೋಪದಡಿ ಅಬಕಾರಿ ಇಲಾಖೆಯ ಮಹಿಳಾ ಪ್ರೊಬೆಶನರಿ ಅಬಕಾರಿ ಉಪ ನಿರೀಕ್ಷಕರೊಬ್ಬರ ಮೇಲೆ ಎಸಿಬಿ ತಂಡ ದಾಳಿ ನಡೆಸಿ,ಮಹಿಳಾ ಅಧಿಕಾರಿಯನ್ನು ವಶಕ್ಕೆ ಪಡೆದ ಘಟನೆ ಅಂಕೋಲಾದಲ್ಲಿ ಮಂಗಳವಾರ ನಡೆದಿದೆ.

ಕಳೆದ ಫೆಬ್ರವರಿ 26 ರಂದು ಅಂಕೋಲಾ ಹಾರವಾಡ ರೈಲ್ವೆ ಸೇತುವೆ ಬಳಿ ಅಂಕೋಲಾ ಮತ್ತು ಕಾರವಾರದ ಅಬಕಾರಿ ಅಧಿಕಾರಿಗಳ ತಂಡ ದಾಳಿ ನಡೆಸಿ ಎರಡು ಪ್ರತ್ಯೇಕ ದ್ವಿಚಕ್ರ ವಾಹನಗಳಲ್ಲಿ ಸಾಗಿಸಲಾಗುತ್ತಿದ್ದ ಗೋವಾ ರಾಜ್ಯದಲ್ಲಿ ತಯಾರಾದ ಭಾರಿ ಪ್ರಮಾಣದ ಮದ್ಯ ಮತ್ತು ಎರಡು ದ್ವಿಚಕ್ರ ವಾಹನ ಜಪ್ತು ಮಾಡಿಕೊಂಡಿದ್ದು ಅವುಗಳು ಲಕ್ಷಾಂತರ ಮೌಲ್ಯದ್ದೆಂದು ಅಂದಾಜಿಸಲಾಗಿತ್ತು.

ಅಕ್ರಮ ಮದ್ಯ ಸಾಗಾಟ ಪ್ರಕರಣದಡಿ ಕಾರವಾರ ವಿವೇಕಾನಂದ ನಗರ ನಿವಾಸಿ ಮುಶ್ತಾಕ್ ಹುಸೇನ್ ಮತ್ತು ತಾರಿವಾಡಾದ ಪ್ರವೀಣ ರಾಜನ್ ಎನ್ನುವವರ ಮೇಲೆ ಕಾರವಾರ ಹಾಗೂ ಅಂಕೋಲಾ ವಲಯ ವ್ಯಾಪ್ತಿಯಲ್ಲಿ ಪ್ರತ್ಯೇಕ ಎರಡು ಪ್ರಕರಣ ದಾಖಲಿಸಲಾಗಿತ್ತು.

ಇದೇ ಪ್ರಕರಣದ ಆರೋಪಿತನಾಗಿದ್ದ ಮುಶ್ತಾಕ್ ಹುಸೇನ್ ಬಳಿ ಅಬಕಾರಿ ಉಪ ನಿರೀಕ್ಷಕಿ ಪ್ರೀತಿ ರಾಥೋಡ್ ಹಣಕ್ಕಾಗಿ ಬೇಡಿಕೆ ಇಟ್ಟಿದ್ದು ಈ ಕುರಿತು ಮುಶ್ತಾಕ್ ಅವರು ಕಾರವಾರ ಎ.ಸಿ.ಬಿ ಗೆ ದೂರು ಸಲ್ಲಿಸಿದ್ದರು ಎನ್ನಲಾಗಿದೆ.

ದೂರಿನನ್ವಯ ಕಾರ್ಯಾಚರಣೆ ನಡೆಸಿದ ಎ.ಸಿ.ಬಿ ತಂಡ ಅಬಕಾರಿ ಉಪ ನಿರೀಕ್ಷಕಿ 20 ಸಾವಿರ ಲಂಚ ಸ್ವೀಕರಿಸುತ್ತಿದ್ದ ಸಂದರ್ಭದಲ್ಲಿ ಬಲೆ ಬೀಸಿ ಮಹಿಳಾ ಅಧಿಕಾರಿಯನ್ನು ವಶಕ್ಕೆ ಪಡೆದು ಕೊಂಡು ತನಿಖೆ ಮುಂದುವರಿಸಿದ್ದಾರೆ.

ಕಾರವಾರ ಎ.ಸಿ.ಬಿ ಡಿ.ವೈ.ಎಸ್.ಪಿ ಪ್ರಕಾಶ ನೇತೃತ್ವದಲ್ಲಿ, ಮಹಿಳೆಯರೂ ಸೇರಿ 6 ಜನ ಅಧಿಕಾರಿಗಳ ತಂಡ ದಾಳಿ ನಡೆಸಿದ್ದು,ಪ್ರಕರಣದ ಕುರಿತಂತೆ ಹೆಚ್ಚಿನ ಮಾಹಿತಿ ತಿಳಿದು ಬರಬೇಕಿದೆ.ಆರೋಪಿಯನ್ನು ವಶಕ್ಕೆ ಪಡೆದಿರುವ ಎಸಿಬಿ ( ಬ್ರಷ್ಟಾಚಾರ ನಿಗ್ರಹ ದಳ ) ಯವರು ಅಂಕೋಲಾ ತಾಲೂಕು ಆಸ್ಪತ್ರೆಯಲ್ಲಿ ಆರೋಪಿತ ಮಹಿಳಾ ಅಧಿಕಾರಿಯ ವೈದ್ಯಕೀಯ ಪರೀಕ್ಷೆ ನಡೆಸಿ,ಹೆಚ್ಚಿನ ತನಿಖೆಗಾಗಿ ತಮ್ಮ ವಶಕ್ಕೆ ಪಡೆದುಕೊಂಡು ಕಾನೂನು ಕ್ರಮ ಮುಂದುವರಿಸಿದ್ದಾರೆ.

ತನ್ನ ಬಳಿ ಮಹಿಳಾ ಅಧಿಕಾರಿ ನಡೆಸಿದ ಡಿಲ್ ಕುರಿತಂತೆ ಮೊಬೈಲ್ ಮಾತುಕತೆ ಆಡಿಯೋ ಮತ್ತಿತರ ದಾಖಲೆಗಳಿವೆ ಎಂದು ಹೇಳಿಕೊಳ್ಳುವ ಆರೋಪಿ,ಇದೇ ವೇಳೆ ಮಹಿಳಾ ಅಧಿಕಾರಿಯನ್ನು ಲಂಚದ ಬಲೆಗೆ ಬೀಳಿಸಿದ ಕುರಿತು ಹೇಳಿಕೆ ನೀಡುವಾಗ , ತನ್ನ ಮೇಲಿರುವ ಅತ್ತಮ ಮದ್ಯ ಸಾಗಾಟ ಆರೋಪಗಳ ಕುರಿತು ವಿವರಣೆ ನೀಡುವಾಗ, ದಿಕ್ಕು ತಪ್ಪಿಸುವ ಹೇಳಿಕೆ ನೀಡುತ್ತಿದ್ದಾನೆ ಎನ್ನಲಾಗಿದ್ದು, ಅದು ಪ್ರಕರಣದ ಅಸಲಿಯತ್ತಿನ ಕುರಿತ ಹಲವು ರೀತಿಯ ಸಂಶಯ ಹಾಗೂ ಪ್ರಶ್ನೆಗಳಿಗೆ ಕಾರಣವಾಗಿದೆ ಎನ್ನಲಾಗಿದೆ..

ಒಟ್ಟಿನಲ್ಲಿ ಆರೋಪಿ ಜೊತೆ ಕಳ್ಳ ಡೀಲ್ ಕುದುರಿಸಲು ಹೋಗಿ ತಮ್ಮ ಪ್ರೊಬೆಶನರಿ ಅವಧಿ ಮುಗಿಯುವ ಮುನ್ನವೇ ಲಂಚ ಕೇಳಿದ ಆರೋಪದ ಬಲೆಯಲ್ಲಿ ಸಿಲುಕಿರುವ ಈ ಅಧಿಕಾರಿಯ ಮುಂದಿನ ಭವಿಷ್ಯವೇನು ಎನ್ನುವ ಪ್ರಶ್ನೆ ಸಾರ್ವಜನಿಕ ವಲಯದಿಂದ ಕೇಳಿ ಬಂದಿದ್ದು,ವಿಚಾರಣೆ ಮುಕ್ತಾಯಗೊಂಡ ನಂತರವಷ್ಟೇ ಸ್ಪಷ್ಟ ಚಿತ್ರಣ ದೊರೆಯಬೇಕಿದೆ.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

ವಿಶೇಷ ಸೂಚನೆ: ಉತ್ತರಕನ್ನಡದ ಪ್ರಮುಖ ಸುದ್ದಿ, ವಿಶೇಷ ವರದಿ, ಸಭೆ-ಸಮಾರಂಭ ಉದ್ಯೋಗದ ಮಾಹಿತಿಯನ್ನು ನಿರಂತರವಾಗಿ ಪಡೆಯಿರಿ. ವಿಸ್ಮಯ ಟಿ.ವಿಯ 8762287698 ಈ ನಂಬರ್ ಸೇವ್ ಮಾಡಿಕೊಂಡು, ನಮ್ಮ ವಾಟ್ಸಪ್ ನಂಬರ್‌ಗೆ ಹಾಯ್ ಅಂತ ಮೆಸೇಜ್ ಮಾಡಿ ವಿಸ್ಮಯ ಟಿ.ವಿ ನ್ಯೂಸ್ ಗ್ರೂಫ್ ಮೂಲಕ ಕ್ಷಣ ಕ್ಷಣದ ಸುದ್ದಿಗಳನ್ನು, ಮೊಬೈಲ್ ನಲ್ಲಿ ನೀವಿರುವ ಸ್ಥಳದಲ್ಲೇ ನಿರಂತರವಾಗಿ ಪಡೆಯಿರಿ. ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ., ಹಾಯ್ ಅಂತ ಮೆಸೇಜ್ ಮಾಡಿ

Back to top button