Important
Trending

ವಿಐಪಿ ಟ್ರ್ಯಾಕಿನಲ್ಲಿಯೇ ತಮ್ಮ ಜೀಪ್ ಬಿಡುವಂತೆ ಪಟ್ಟುಹಿಡಿದ ಅಧಿಕಾರಿ? ಟೋಲ್ ಗೇಟ್ ಬಳಿ ಹೆಚ್ಚುತ್ತಿರುವ ಬೀದಿ ರಂಪಾಟ

ಅಂಕೋಲಾ : ಸರಕಾರಿ ಅಧಿಕಾರಿಯೋರ್ವರು ವಿಐಪಿ ಟ್ರ್ಯಾಕಿನಲ್ಲೇ ತಮ್ಮ ವಾಹನವನ್ನು ಬಿಡಬೇಕೆಂದು ಪಟ್ಟು ಹಿಡಿದು ಅರ್ಧ ತಾಸಿಗೂ ಹೆಚ್ಚು ಕಾಲ ಸರಕಾರಿ ವಾಹನ ನಿಲ್ಲಿಸಿಟ್ಟು ದರ್ಪ ತೋರಿದ್ದಾರೆ ಎನ್ನಲಾದ  ಘಟನೆ ರಾಷ್ಟ್ರೀಯ ಹೆದ್ದಾರಿ 66 ರ  ಹಟ್ಟಿಕೇರಿ ಟೋಲಗೇಟ್ ಬಳಿ ಗುರುವಾರ  ನಡೆದಿದೆ.  ರಾಷ್ಟ್ರೀಯ ಹೆದ್ದಾರಿ ಚತುಷ್ಪಥ ಕಾಮಗಾರಿ ಗುತ್ತಿಗೆ ಪಡೆದ ಆಯ್ ಆರ್ ಬಿ ಕಂಪನಿ, ರಸ್ತೆ ಶುಲ್ಕ ವಸೂಲಿಗೆ  ಟೋಲಗೇಟ ತೆರೆದಿದ್ದು, ಇಲ್ಲಿ ಲಘು ವಾಹನ, ಭಾರೀ ವಾಹನ, ಸ್ಥಳೀಯ ವಾಹನ, ಅಂಬ್ಯುಲನ್ಸ ಹೀಗೆ ಬೇರೆ ಬೇರೆ ಟ್ರ್ಯಾಕಗಳನ್ನು ನಿಗದಿಪಡಿಸಲಾಗಿದೆ.

ಅದರಂತೆ ವಿಐಪಿಗಳ ವಾಹನಗಳು ಬಂದಾಗ ನಿರ್ದಿಷ್ಠ ಟ್ರ್ಯಾಕನಲ್ಲಿ ಸಾಗಬೇಕಾಗುತ್ತದೆ. ವಿಐಪಿ ಟ್ರ್ಯಾಕನಲ್ಲಿ ಓರ್ವ ಸೆಕ್ಯೂರಿಟಿ ಗಾರ್ಡ ಇದ್ದು ಸೈರನ್ ಇರುವ ಎಸ್ಕಾರ್ಟ ವಾಹನದ ಜೊತೆ ವಿಐಪಿಗಳ ವಾಹನ ಬಂದಾಗ ಮಾತ್ರ ಈ ಗೇಟನ್ನು ಓಪನ್ ಮಾಡಲಾಗುತ್ತದೆ. ಆದರೆ ನೀರಾವರಿ ಇಲಾಖೆಗೆ ಸಂಬಂಧಪಟ್ಟ  ಅಧಿಕಾರಿಯೋರ್ವರು ತಮ್ಮ ಸರಕಾರಿ ಜೀಪನ್ನು ವಿಐಪಿ ಗೇಟ್ ಮೂಲಕವೇ ಬಿಡಬೇಕೆಂದು ಪಟ್ಟು ಹಿಡಿದಿದ್ದರು ಎನ್ನಲಾಗಿದ್ದು. ನಿಯಮದ ಪ್ರಕಾರ ಇಲ್ಲಿ ಬಿಡುವಂತಿಲ್ಲ.       

ಸರಕಾರಿ ವಾಹನಗಳನ್ನು ಬೇರೆ ಟ್ರ್ಯಾಕನಲ್ಲಿ ಉಚಿತವಾಗಿ ಬಿಡಲಾಗುತ್ತದೆ ಎಂದು ಟೋಲ್ ಸಿಬ್ಬಂದಿಯವರು ತಿಳಿಹೇಳಿದರೂ ಪಟ್ಟು ಬಿಡದೆ ತಾನು ಅಲ್ಲಿಂದಲೇ ಹೋಗುವದಾಗಿ ದರ್ಪ ತೋರಿದ್ದಾರೆ   ಎಂಬ ಮಾತು ಕೇಳಿ ಬರುತ್ತಿದೆ. ಕಳೆದ ಕೆಲವು ದಿನಗಳಿಂದ ಈ ಅಧಿಕಾರಿ ಇದೇರೀತಿ ವರ್ತಿಸುತ್ತಿದ್ದದ್ದು ಟೋಲ್ ಗೇಟ್ ಸಿಸಿ ಕ್ಯಾಮರಾ ಹಾಗೂ ಪ್ರವಾಸಿಗರ ಮೊಬೈಲಗಳಲ್ಲೂ ಸೆರೆಯಾಗಿದೆ ಎನ್ನಲಾಗಿದೆ. ಆದರೂ  ಈ ಕುರಿತು ಯಾವುದೇ ಪ್ರಕರಣ  ದಾಖಲಾಗಿಲ್ಲ ಎನ್ನಲಾಗಿದೆ.

ಕಳೆದ ಕೆಲ ದಿನಗಳ ಹಿಂದಷ್ಟೇ ಪ್ರವಾಸಿ ಪೋಲಿಸ್ ಓರ್ವರು ಕುಟುಂಬ ಸಮೇತ ಪ್ರಯಾಣಿಸುತ್ತಿದ್ದ ವೇಳೆ ಕಾನೂನುಬಾಹಿರವಾಗಿ ತಾವು ಪ್ರಯಾಣಿಸುತ್ತಿದ್ದ ಖಾಸಗಿ ವಾಹನಕ್ಕೆ ಪೊಲೀಸ್ ನಾಮಫಲಕ ಅಳವಡಿಸಿಕೊಂಡು,ಮೊದಲು ಟೋಲ್ ಶುಲ್ಕ ನೀಡಲು ತಗಾದೆ ತೆಗೆದು, ಟೋಲ್ ಸಿಬ್ಬಂದಿಗಳೊಂದಿಗೆ ಜಗಳಕ್ಕೆ ಇಳಿದು,ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದ ಘಟನೆ ಅದಾವುದೋ ಕಾರಣಗಳಿಂದ ರಾಜಿಯಾದಂತಿದ್ದು,ಪ್ರಕರಣ ದಾಖಲಾಗಿರಲಿಲ್ಲ.   

ಸಾರ್ವಜನಿಕರಿಗೆ ಮಾದರಿಯಾಗಬೇಕಾದ ಕೆಲ ಇಲಾಖೆಗಳ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಆಗೊಮ್ಮೆ ಈಗೊಮ್ಮೆ ಸಭ್ಯತೆ ಮೀರಿ ನಡೆಯುವುದು ಎಷ್ಟು ಸರಿ ಎನ್ನುವ ಮಾತು ಕೇಳಿ ಬರುತ್ತಿದ್ದು, ಅಂತವರ ಮೇಲೆಸಂಬಂಧಿತ ಮೇಲಾಧಿಕಾರಿಗಳೇ ಶಿಸ್ತಿನಕ್ರಮ ಕೈಗೊಳ್ಳಬೇಕು ಎನ್ನುವ ಮಾತುಗಳು ಕೇಳಿ ಬರುತ್ತಿವೆ. ಇದೇ ವೇಳೆ ಟೋಲ್ ಶುಲ್ಕ ವಸೂಲಾತಿಯ ನೆಪದಲ್ಲಿ  ಆಯ್ ಆರ್ ಬಿ ಸಿಬ್ಬಂದಿಗಳೂ ಕೆಲವೊಮ್ಮೆ ಹದ್ದುಮೀರಿ ವರ್ತಿಸುತ್ತಾರೆ ಎನ್ನಲಾಗಿದ್ದು,ಮೇಲ್ವಿಚಾರಕರು ಈ ಕುರಿತು ತಮ್ಮ ಸಿಬ್ಬಂದಿಗಳಿಗೆ ಶಿಸ್ತು ಸಂಯಮದ ಪಾಠ ಹೇಳಿಕೊಡಬೇಕು ಎನ್ನುವ ಮಾತು ಸಾರ್ವಜನಿಕ ವಲಯದಿಂದ ಕೇಳಿಬಂದಿದೆ.ಅಲ್ಲದೇ ಅಪೂರ್ಣಗೊಂಡಿರುವ ಕಾಮಗಾರಿಗಳನ್ನು ಶೀಘ್ರ ಪೂರ್ಣಗೊಳಿಸುವಂತೆ ಪ್ರಜ್ಞಾವಂತರು ಆಗ್ರಹಿಸುತ್ತಿದ್ದಾರೆ.   

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Back to top button